ನೆಲಮಂಗಲ :ಕೊರೊನಾ ಸಂಕಷ್ಟಕ್ಕೆ ಮನೆಯ ಬಾಡಿಗೆ ಕಟ್ಟಲಾಗದೆ ಹೆತ್ತ ಮಗಳನ್ನೇ ಮಾರಿದ ಕರುಣಾ ಜನಕ ಕಥೆ ನಗರದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ರೇಣುಕಾನಗರದ ನಿವಾಸಿ ನಾಗಲಕ್ಷ್ಮಮ್ಮರಿಗೆ 1 ಗಂಡು ಹಾಗೂ ಎರಡು ಹೆಣ್ಣುಮಕ್ಕಳಿದ್ದರು. ಮನೆಯಲ್ಲಿ ಕಿತ್ತು ತಿನ್ನೋ ಬಡತನ. ಗಂಡ ಶಂಕರ್ ಕೈಕೊಟ್ಟು ಹೋಗಿದ್ದಾನೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಾಗಲಕ್ಷ್ಮಿ ಹೆಗಲಿಗೆ ಬಿದ್ದ ಕಾರಣ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು.
11 ಸಾವಿರಕ್ಕೆ 3 ವರ್ಷದ ಮಗಳ ಮಾರಾಟ ಗಂಡ ತೊರೆದ ಬೆನ್ನಲ್ಲೇ ಗಂಡು ಮಗು 10 ತಿಂಗಳ ಹಿಂದೆಯೇ ಮೃತಪಟ್ಟಿತ್ತು. ಮತ್ತೊಂದು ಮಗುವನ್ನ ನಾಗಲಕ್ಷ್ಮಿ ಸಂಕೇಶ್ವರದ ತನ್ನ ತಾಯಿ ಮನೆಗೆ ಕಳುಹಿಸಿದ್ದರು. ಈ ನಡುವೆ ಲಾಕ್‌ಡೌನ್ ಆದಾಗಿನಿಂದ ಹೋಟೆಲ್‌ನಲ್ಲೂ ಕೆಲಸವಿಲ್ಲದೆ ಮನೆಯ ಬಾಡಿಗೆ ಸಹ ಕಟ್ಟಲಾಗದೆ ಕಂಗೆಟ್ಟು ಹೋಗಿದ್ದರು.
ಈ ವೇಳೆ ನಾಗಲಕ್ಷ್ಮಿ ಮನೆಯ ಪಕ್ಕದ ನಿವಾಸಿ ಸಂಗೀತಾ ಎಂಬುವರು 3 ವರ್ಷದ ಹೆಣ್ಣು ಮಗುವನ್ನ ಮಾರುವಂತೆ ಪ್ರಚೋದನೆ ಮಾಡಿದ್ದಾರೆ. ಒಲ್ಲೆ ಎಂದ ನಾಗಲಕ್ಷ್ಮಿಗೆ ಮನವೊಲಿಸಿ ತುಮಕೂರು ಮೂಲದ ಕೃಷ್ಣಮೂರ್ತಿ ಎಂಬುವರಿಗೆ 11,000 ರೂ.ಗೆ ಮಾರಾಟ ಮಾಡಿದ್ದಾರೆ.
ಅಲ್ಲದೆ, ಕೇಳಿದಾಗ ಮಗುವನ್ನ ತೋರಿಸುವಂತೆ 50 ರೂ. ಬಾಂಡ್ ಪೇಪರ್‌ನಲ್ಲಿ ಅಗ್ರಿಮೆಂಟ್ ಮಾಡಿಕೊಂಡು ದತ್ತು ಪಡೆದ ರೀತಿ ಆಗಸ್ಟ್ 11ರಂದು ಮಗುವನ್ನ ಮಾರಾಟ ಮಾಡಲಾಗಿದೆ. ನನ್ನ ಮಗುವನ್ನು ತೋರಿಸಿ ಎಂದು ಫೋನ್ ಮಾಡಿದಾಗ ದತ್ತು ಪಡೆದ ಕೃಷ್ಣಮೂರ್ತಿ ಫೋನ್ ಸ್ವೀಕರಿಸದ ಹಿನ್ನೆಲೆ ಮಗುವನ್ನ ಕಳೆದುಕೊಂಡ ಮಾತೃ ಹೃದಯ ಹಂಬಲಿಸುತ್ತಾ ನೆಲಮಂಗಲ ಟೌನ್ ಠಾಣೆ ಮೆಟ್ಟಿಲೇರಿದರು.
ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ವೃತ್ತ ನಿರೀಕ್ಷಕ ಶಿವಣ್ಣ ಮಗು ದತ್ತು ಪಡೆದ ಕೃಷ್ಣಮೂರ್ತಿಯನ್ನ ಠಾಣೆಗೆ ಕರೆಸಿ, 3 ವರ್ಷದ ಹೆಣ್ಣು ಮಗುವನ್ನ ತಾಯಿ ಮಡಿಲು ಸೇರಿಸಿದರು. ಮಗುವನ್ನ ನೋಡಿದ ತಾಯಿ ಕಣ್ಣೀರಿಡುತ್ತಾ, ಬಿಗಿದಪ್ಪಿ ಪೊಲೀಸರಿಗೆ ಧನ್ಯವಾದ ತಿಳಿಸಿದರು.