ಹೊಸಕೋಟೆ(ಬೆಂಗಳೂರು ಗ್ರಾಮಾಂತರ) : ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅರಣ್ಯ ಇಲಾಖೆಯ, ಹೊಸಕೋಟೆ ತಾಲೂಕಿನ ಗೊಟ್ಟಿಪುರ ವನ ವಿಜ್ಞಾನ ಕೇಂದ್ರದ ಅರಣ್ಯ ಪ್ರದೇಶದಲ್ಲಿರುವ ಸುಮಾರು 25 ಎಕರೆ ಜಾಗದಲ್ಲಿ ಅರಣ್ಯೀಕರಣದ ವಿವಿಧ ಮರಗಳನ್ನು ಸಂಶೋಧನೆಗಾಗಿ ಬೆಳೆಸಲಾಗುತ್ತಿದೆ. ಅದರಲ್ಲಿ ಬೆಲೆಬಾಳುವ 500ಕ್ಕೂ ಅಧಿಕ ಶ್ರೀಗಂಧ ಮರಗಳನ್ನು ರಾತ್ರೋರಾತ್ರಿ ಖದೀಮರು ಕಡಿದು ಪರಾರಿಯಾಗಿದ್ದಾರೆ.
ಇಲ್ಲಿನ 25 ಎಕರೆ ಅರಣ್ಯ ಪ್ರದೇಶವನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ಬರುವ ವನ ವಿಜ್ಞಾನ ಕೇಂದ್ರದ ಸಂಶೋಧನೆಗೆ ನೀಡಲಾಗಿದೆ. ಪ್ರದೇಶದಲ್ಲಿ ಶ್ರೀಗಂಧ ಹಾಗೂ ಬಿದಿರು ಮರಗಳನ್ನು ಸಂಶೋಧನೆಗಾಗಿ ಬೆಳೆಸಲಾಗಿದೆ. 10 ವರ್ಷದಿಂದ ಸಂಶೋಧನೆಗಾಗಿ ಸಾವಿರಾರು ಶ್ರೀಗಂಧ ಮರಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಆದರೆ ರಾತ್ರೋರಾತ್ರಿ ನೂರಾರು ಶ್ರೀಗಂಧ ಮರಗಳಿಗೆ ಖದೀಮರು ಕೊಡಲಿಪೆಟ್ಟು ಹಾಕಿದ್ದಾರೆ.
ವನ ವಿಜ್ಞಾನ ಅರಣ್ಯ ಪ್ರದೇಶದ 500ಕ್ಕೂ ಹೆಚ್ಚು ಶ್ರೀಗಂಧ ಮರ ರಾತ್ರೋರಾತ್ರಿ ನಾಪತ್ತೆ ಕೋಟ್ಯಂತರ ಮೌಲ್ಯದ ಶ್ರೀಗಂಧ ಮರಗಳು ಎಲ್ಲಿ ಹೋದವು ಎನ್ನುವುದೇ ಇನ್ನೂ ನಿಗೂಢವಾಗಿದೆ. ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು, ಗಾರ್ಡ್ ಸೇರಿದಂತೆ ಎಲ್ಲಾ ವ್ಯವಸ್ಥೆಯಿದ್ದರೂ ಮರಗಳನ್ನು ಕಳ್ಳರು ಕಡಿದಿದ್ದಾರೆ. ಕೆಲವು ಶ್ರೀಗಂಧ ಮರಗಳನ್ನು ಅರ್ಧ ಕಡಿದು ಅಲ್ಲಿಯೇ ಬಿಟ್ಟಿದ್ದಾರೆ. ಶ್ರೀಗಂಧ ಮರಗಳ ಕಳ್ಳತನದ ಬಗ್ಗೆ ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆಯೇ ಅನುಮಾನ ವ್ಯಕ್ತವಾಗಿದೆ.
ಒಂದು ಕೆಜಿ ಶ್ರೀಗಂಧ ಮರ 15 ಸಾವಿರ ರೂಪಾಯಿ ಬೆಲೆ ಬಾಳುತ್ತೆ. ಹೀಗಿದ್ದು ನೂರಾರು ಮರಗಳನ್ನು ಕಡಿದು ಸಾಗಾಣಿಕೆ ಮಾಡುವವರೆಗೂ ಸಿಬ್ಬಂದಿ ಕಣ್ಮುಚ್ಚಿ ಕುಳಿತರಾ ಎನ್ನುವ ಅನುಮಾನ ಮೂಡಿದೆ. ಈ ಸಂಬಂಧ ಅಧಿಕಾರಿ ನಾಗರಾಜ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಮದ್ಯ ಸೇವಿಸಿ 8 ಮಂದಿ ಸಾವಿಗೀಡಾಗಿರುವ ಶಂಕೆ