ಬೆಂಗಳೂರು: ಮಾನವ ಕುಲಕ್ಕೆ ಮಹಾಮಾರಿಯಾಗಿ ಹೊರಹೊಮ್ಮಿರುವ ಕೋವಿಡ್ ಎಲ್ಲ ವಯೋಮಾನದವರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಮನೆ ಬಿಟ್ಟು ಎಲ್ಲೂ ಹೋಗುವುದೇ ಇಲ್ಲ ಅನ್ನೋವರಲ್ಲೂ ಸೋಂಕು ಕಂಡು ಬಂದಿದೆ. ಎರಡನೇ ಅಲೆಯು ಗರ್ಭಿಣಿಯರಿಗೂ ಕಂಟಕವಾಗಿ ಪರಿಣಮಿಸಿದ್ದು, ಅಪಾರ ಜೀವ ಹಾನಿ ಸಂಭವಿಸಿದೆ. ನಗರದಲ್ಲೂ ಕೋವಿಡ್ ಹಾವಳಿ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. 500ಕ್ಕೂ ಹೆಚ್ಚು ಮಂದಿ ಗರ್ಭಿಣಿಯರು ಕೊರೊನಾಗೆ ತುತ್ತಾಗಿದ್ದಾರೆ.
ಶಿವಾಜಿನಗರದ ಸರ್ಕಾರಿ ಗೋಶಾ ಆಸ್ಪತ್ರೆಯನ್ನು ಕೋವಿಡ್ ಪಾಸಿಟಿವ್ ಗರ್ಭಿಣಿಯರಿಗೆ ಮೀಸಲಿಡಲಾಗಿದೆ. ವಾಣಿವಿಲಾಸ್ ಆಸ್ಪತ್ರೆಗೆ ಬರುವ ಗರ್ಭಿಣಿಯರಲ್ಲಿ ಪಾಸಿಟಿವ್ ದೃಢಪಟ್ಟರೆ ಅಂತಹವರನ್ನ ಗೋಶಾ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಎರಡನೇ ಅಲೆ ಶುರುವಾದಾಗಿಂದ ಅಂದರೆ ಮಾರ್ಚ್ 27 ರಿಂದ ಈ ಆಸ್ಪತ್ರೆ ಕಾರ್ಯಾರಂಭ ಮಾಡುತ್ತಿದ್ದು, ಇಲ್ಲಿಯವರೆಗೆ 536 ಕೋವಿಡ್ ಸೋಂಕಿತ ಗರ್ಭಿಣಿಯರು ದಾಖಲಾಗಿದ್ದಾರೆ. ಸಾವಿನ ಪ್ರಮಾಣ 4.85 ರಷ್ಟು ಇದೆ.
ಎರಡನೇ ಅಲೆಯಾಟ- ಗರ್ಭಿಣಿಯರಿಗೆ ಪ್ರಾಣಸಂಕಟ
ಗರ್ಭಿಣಿಯರು ಹೊರಗೆ ಹೋಗುವಂತಿಲ್ಲ, ಒಳಗೂ ಇರುವಂತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ತಿಂಗಳ ಪರೀಕ್ಷೆಗಾಗಿ, ಅನಾರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತೆ. ಹೀಗಾಗಿ ಅದೆಷ್ಟು ಮುನ್ನೆಚ್ಚರಿಕೆ ವಹಿಸಿದರೂ ಕೊರೊನಾ ಸೋಂಕಿನಿಂದ ಪಾರಾಗುವುದು ಕಷ್ಟಸಾಧ್ಯವಾಗಿದೆ. ಗೋಶಾ ಆಸ್ಪತ್ರೆಗೆ ದಾಖಲಾದ ಹಾಗೂ ಯಶಸ್ವಿಯಾದ ಅಂಕಿಅಂಶಗಳನ್ನಾ ನೋಡಿದರೆ...
- ಗೋಶಾ ಆಸ್ಪತ್ರೆಗೆ ದಾಖಲಾದ ಸೋಂಕಿತ ಗರ್ಭಿಣಿಯರು 536
- ಇದರಲ್ಲಿ 284 ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ
- 133 ಗರ್ಭಿಣಿಯರಿಗೆ ಸಹಜ ಹೆರಿಗೆ( Normal delivery)
- 151 ಗರ್ಭಿಣಿಯರಿಗೆ ಸಿ-ಸೆಕ್ಷನ್(cesarean section)
- 05 ಪ್ರಕರಣದಲ್ಲಿ ಅಬಾರ್ಷನ್
- 284 ಹೆರಿಗೆ ಪ್ರಕರಣಗಳಲ್ಲಿ 7 ಮಕ್ಕಳಿಗೆ ಮಾತ್ರ ತಾಯಿಯಿಂದ ಮಗುವಿಗೆ ಸೋಂಕು
- 444 ಮಹಿಳೆಯರು ಕೋವಿಡ್ ಗೆದ್ದು ಡಿಸ್ಚಾರ್ಜ್
- 45 ಪ್ರಕರಣಗಳಲ್ಲಿ ಅವಧಿಗೂ ಮುನ್ನ ಹೆರಿಗೆ
- ಒಟ್ಟು 26 ಸಾವಿನ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಮಗುವಿನ ಜೊತೆಗೆ ತಾಯಿ ಮೃತಪಟ್ಟ ಸಂಖ್ಯೆ 10
- ಹೆರಿಗೆ ಬಳಿಕ 16 ಸೋಂಕಿತರು ಮೃತಪಟ್ಟಿದ್ದು, ಇದರ ಜೊತೆಗೆ 8 ಮಕ್ಕಳು ಕೂಡ ಸಾವನ್ನಪ್ಪಿವೆ.