ಬೆಂಗಳೂರು :ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ. ಮೊದಲ ದಿನವೇ 20,994 ವಿದ್ಯಾರ್ಥಿಗಳು ಹಲವು ಕಾರಣಗಳಿಂದ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಇಂದು ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆದಿದೆ. ಸುಮಾರು 8,69,399 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 8,48,405 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಇನ್ನು ಪರೀಕ್ಷಾ ಅಕ್ರಮ, ಅವ್ಯವಹಾರದಲ್ಲಿ ಯಾರು ಭಾಗಿಯಾಗಿಲ್ಲ. ಯಾವುದೇ ವಿದ್ಯಾರ್ಥಿಯು ಡಿಬಾರ್ ಆಗಿಲ್ಲ. ಹಾಗೇ ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿಲ್ಲ.
- ಮೊದಲ ಬಾರಿಗೆ ಹಾಜರಾದ ವಿದ್ಯಾರ್ಥಿಗಳು- 8,11,195
- ಖಾಸಗಿ ಅಭ್ಯರ್ಥಿಗಳು- 35,509
- ಪುನರಾವರ್ತಿತ ವಿದ್ಯಾರ್ಥಿಗಳು- 1,701
- ಅನಾರೋಗ್ಯ ಹಿನ್ನೆಲೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದವರು- 336 ವಿದ್ಯಾರ್ಥಿಗಳು
ಶೇಕಡಾವಾರು ಹಾಜರಾತಿ ನೋಡುವುದಾದರೆ
2021-2022
- ದಾಖಲಾತಿ- 8,48,405
- ಗೈರು ಹಾಜರಿ- 20,994
- ಶೇಕಡಾವಾರು- 97.59%
2020-2021
- ದಾಖಲಾತಿ-8,19,398
- ಗೈರು ಹಾಜರಿ- 3,769
- ಶೇಕಡಾವಾರು- 99.54%
ಕಳೆದ ವರ್ಷ ಪರೀಕ್ಷೆಗೆ ಕೇವಲ 3,769 ವಿದ್ಯಾರ್ಥಿಗಳು ಗೈರಾಗಿದ್ದರೆ, ಈ ಬಾರಿ ಬರೋಬ್ಬರಿ 20,994 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇದಕ್ಕೆ ಹಿಜಾಬ್ ವಿವಾದ ಕಾರಣವೋ ಅಥವಾ ಬೇರೆ ಏನು ಕಾರಣ ಎಂಬುದನ್ನ ಶಿಕ್ಷಣ ಇಲಾಖೆ ಪತ್ತೆ ಮಾಡಬೇಕಿದೆ. ಕೋವಿಡ್ ನಂತರ ಇದೇ ಮೊದಲ ಬಾರಿಗೆ ಸಾಧಾರಣ ರೀತಿಯಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿದೆ.
8ನೇ ಹಾಗೂ 9ನೇ ತರಗತಿ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲೇ ಅಟೆಂಡ್ ಆಗಿ ಪಾಸ್ ಆಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ದೈಹಿಕವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಮೊದಲೇ ತಡವಾಗಿ ಆರಂಭವಾಗಿದ್ದ ಶೈಕ್ಷಣಿಕ ವರ್ಷ ಒಂದೆಡೆಯಾದ್ರೆ, ಮತ್ತೊಂದೆಡೆ ಪಠ್ಯಕ್ರಮ ಬೇಗ ಓದಬೇಕು ಎಂಬ ಒತ್ತಡ ವಿದ್ಯಾರ್ಥಿಗಳ ಮೇಲಿತ್ತು.
ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವರು :ಪಠ್ಯದಲ್ಲಿನ ಶೇ.20ರಷ್ಟು ಭಾಗವನ್ನು ಕಡಿತಗೊಳಿಸಲಾಗಿದ್ದರೂ, ಪರೀಕ್ಷೆ ಹೇಗಿರುತ್ತದೆ ಎಂಬ ಗೊಂದಲ ವಿದ್ಯಾರ್ಥಿಗಳಿಗಿತ್ತು. ಅವರೆಲ್ಲರಿಗೂ ಧೈರ್ಯ ತುಂಬಲು ಖುದ್ದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಇಂದು ಶಾಲೆಗೆ ಭೇಟಿ ನೀಡಿದ್ದರು. ಅಗ್ರಹಾರ ದಾಸರಹಳ್ಳಿ ಬಳಿ ಇರುವ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹೂ ನೀಡಿ, ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಶುಭ ಕೋರಿದರು.
ಮತ್ತೊಂದೆಡೆ ಕೆಲ ತಿಂಗಳ ಹಿಂದಷ್ಟೇ ರಾಜ್ಯಾದ್ಯಂತ ಹಿಜಾಬ್ ವಿಚಾರವಾಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಹೈಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ, ತರಗತಿಯಲ್ಲಿ ಹಿಜಾಬ್ ಧಾರಣೆ ಅತ್ಯವಶ್ಯವಲ್ಲ ಎಂಬ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ಶಿಕ್ಷಣ ಇಲಾಖೆ ಕೂಡ ಪರೀಕ್ಷಾ ಸಂದರ್ಭದಲ್ಲಿ ಈ ಆದೇಶವನ್ನು ಪಾಲಿಸಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಶಾಲೆಯ ಆವರಣದ ಒಳಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ವಿಶೇಷ ಕೊಠಡಿಯಲ್ಲಿ ಹಿಜಾಬ್ ತೆಗೆದು ಪರೀಕ್ಷಾ ಕೇಂದ್ರಕ್ಕೆ ತೆರಳಿದರು.
ಹಿಜಾಬ್ ತೆಗೆಯಲು ಒಪ್ಪದ ಮೇಲ್ವಿಚಾರಕಿ ಅಮಾನತು :ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ವಿದ್ಯಾರ್ಥಿಗಳು ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ನಗರದ ಮಂಜುನಾಥ ನಗರ ಶಿವನಗರದಲ್ಲಿರುವ ಸಿದ್ದಗಂಗಾ ಶಾಲೆಯಲ್ಲಿ ಪರೀಕ್ಷಾ ಕೊಠಡಿಯ ಮೇಲ್ವಿಚಾರಕಿಯಿಂದಲೇ ಹಿಜಾಬ್ ಗೊಂದಲ ಶುರುವಾಗಿತ್ತು.
ಪರೀಕ್ಷೆ ಆರಂಭವಾಗುವುದು 10.30ಕ್ಕೆ ಅಲ್ಲಿಯವರೆಗೂ ನಾನು ಹಿಜಾಬ್ ತೆಗೆಯುವುದಿಲ್ಲ ಅಂತಾ ಮೇಲ್ವಿಚಾರಕಿ ನೂರ್ ಫಾತಿಮಾ ಎಂಬುವರು ಹಿರಿಯ ಅಧಿಕಾರಿಗಳ ಜತೆ ವಾದ ಮಾಡಿದ್ದಾರೆ. ಈ ಕಾರಣದಿಂದ 10.15ಕ್ಕೆ ಅವರನ್ನು ಮೇಲ್ವಿಚಾರಣೆ ಕೆಲಸದಿಂದ ಅಮಾನತು ಮಾಡಿದ್ದಾರೆ.
ಇದನ್ನೂ ಓದಿ:ಹಿಜಾಬ್ ವಿವಾದದ ನಡುವೆಯೇ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ