ಕರ್ನಾಟಕ

karnataka

ETV Bharat / city

ದಾಖಲೆ ಬರೆದ ಮೆಗಾ ಲೋಕ ಅದಾಲತ್: ಒಂದೇ ದಿನ 2.63 ಲಕ್ಷಕ್ಕೂ ಅಧಿಕ ಪ್ರಕರಣ ಇತ್ಯರ್ಥ - ಹಿರಿಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ನ್ಯಾ. ಅರವಿಂದ್ ಕುಮಾರ್

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಡಿ. 19ರಂದು ಏರ್ಪಡಿಸಿದ್ದ ಲೋಕ ಅದಾಲತ್​ನಲ್ಲಿ ಒಟ್ಟು 958 ಪೀಠಗಳು ರಾಜ್ಯಾದ್ಯಂತ ಕಾರ್ಯ ನಿರ್ವಹಿಸಿದ್ದವು. ಬರೋಬ್ಬರಿ 2.63 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಲೋಕ್ ಅದಾಲತ್​ನಲ್ಲಿ ದಾಖಲೆ ಬರೆದಿದೆ.

Lok Adalat
ನ್ಯಾ. ಅರವಿಂದ್ ಕುಮಾರ್

By

Published : Dec 21, 2020, 10:46 PM IST

ಬೆಂಗಳೂರು:ಡಿ.19ರಂದು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ನಡೆದ ಮೆಗಾ ಲೋಕ್​ ಅದಾಲತ್​ನಲ್ಲಿ ಬರೋಬ್ಬರಿ 2.63 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಲೋಕ್ ಅದಾಲತ್​ನಲ್ಲಿ ದಾಖಲೆ ಬರೆದಿದೆ.

ಲೋಕ್​ ಅದಾಲತ್​ನಲ್ಲಿ ಪ್ರಕರಣ ಇತ್ಯರ್ಥ ಕುರಿತು ಮಾಹಿತಿ ನೀಡಿದ ನ್ಯಾ.ಅರವಿಂದ್

ಈ ಕುರಿತು ಇಂದು ಸಂಜೆ ಹೈಕೋರ್ಟ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿರಿಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ನ್ಯಾ. ಅರವಿಂದ್ ಕುಮಾರ್ ಮಾಹಿತಿ ನೀಡಿದರು. ಡಿಸೆಂಬರ್ 19ರಂದು ರಾಜ್ಯದ 30 ಜಿಲ್ಲೆಗಳ 149 ತಾಲೂಕುಗಳಲ್ಲಿ ಲೋಕ ಅದಾಲತ್ ನಡೆಸಿದ್ದೆವು. ಅದಾಲತ್​ನಲ್ಲಿ ಇತ್ಯರ್ಥಪಡಿಸಲು ಒಟ್ಟು 4 ಲಕ್ಷದ 63 ಸಾವಿರದ 197 ಪ್ರಕರಣಗಳನ್ನು ಗುರುತಿಸಲಾಗಿತ್ತು. ಇವುಗಳಲ್ಲಿ ಒಟ್ಟು 2 ಲಕ್ಷ 63 ಸಾವಿರದ 186 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇಷ್ಟೊಂದು ಪ್ರಕರಣಗಳನ್ನು ಒಂದೇ ದಿನದಲ್ಲಿ ಇತ್ಯರ್ಥಪಡಿಸಿರುವುದು ಇದೇ ಮೊದಲು ಎಂದು ವಿವರಿಸಿದರು.

ಅಲ್ಲದೇ, ದಂಡ ವಿಧಿಸಬಹುದಾಗಿದ್ದ ಪ್ರಕರಣಗಳಲ್ಲಿ ಒಟ್ಟು 41 ಕೋಟಿ 45 ಲಕ್ಷ 37 ಸಾವಿರದ 10 ರೂಪಾಯಿಗಳನ್ನು ಸಂಗ್ರಹಿಸಿ ರಾಜ್ಯದ ಬೊಕ್ಕಸಕ್ಕೆ ನೀಡಲಾಗಿದೆ. ಅಲ್ಲದೇ, ಹೈಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ ನ್ಯಾಯಾಂಗ ಅಧಿಕಾರಿಗಳು ಹಾಗೂ ಸಿಬ್ಬಂದಿ ರಜಾ ದಿನದ ಬದಲು ಕರ್ತವ್ಯದ ದಿನವೇ ಕೆಲಸ ನಿರ್ವಹಿಸಿದ್ದರಿಂದ ಸರ್ಕಾರ ಹೆಚ್ಚುವರಿ ನೀಡಬೇಕಿದ್ದ ಡಿ.ಎ ಕೂಡ ಉಳಿತಾಯವಾಗಿದೆ ಎಂದರು. ಹಾಗೆಯೇ, ಈ ಸೇವೆಯನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಡಿ. 19ರಂದು ಏರ್ಪಡಿಸಿದ್ದ ಲೋಕ ಅದಾಲತ್​ನಲ್ಲಿ ಒಟ್ಟು 958 ಪೀಠಗಳು ರಾಜ್ಯಾದ್ಯಂತ ಕಾರ್ಯ ನಿರ್ವಹಿಸಿದ್ದವು. ಅದಾಲತ್​ನಲ್ಲಿ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ ಪ್ರಕರಣಗಳು, ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಗಳು, ನೆಗೋಷಿಯಬಲ್ ಇನ್ಸ್ಟ್ರುಮೆಂಟ್​ ಅಧಿನಿಯಮದ ಪ್ರಕರಣಗಳು, ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, ಕೌಟುಂಬಿಕ ನ್ಯಾಯಾಲಯಗಳ ಪ್ರಕರಣಗಳು ಸೇರಿದಂತೆ ಹಲವು ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ನಿಗದಿಗೊಳಿಸಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಎಲ್ಎಸ್ಎ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಹಾಗೂ ಇತರ ಅಧಿಕಾರಿಗಳು ಇದ್ದರು.

ABOUT THE AUTHOR

...view details