ಬೆಂಗಳೂರು :2021-22ನೇ ಸಾಲಿನ ಆರ್ಥಿಕ ವರ್ಷ ಮುಕ್ತಾಯವಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಈ ಬಾರಿ ಒಟ್ಟು ವಾಣಿಜ್ಯ ತೆರಿಗೆ ರೂಪದಲ್ಲಿ ಸರ್ಕಾರ ಸುಮಾರು 1 ಲಕ್ಷ ಕೋಟಿ ರೂ. ಸಂಗ್ರಹದ ಗಡಿ ದಾಟಿದೆ. ಆದರೂ ಜಿಎಸ್‌ಟಿ ತೆರಿಗೆ ಕೊರತೆ ಮಾತ್ರ ಇನ್ನೂ ಮುಂದುವರಿದಿದೆ.
ರಾಜ್ಯ ಸರ್ಕಾರದ ಬಹುದೊಡ್ಡ ಆದಾಯ ಮೂಲ ವಾಣಿಜ್ಯ ತೆರಿಗೆ. ಅಂದರೆ ಜಿಎಸ್‌ಟಿ. ವಾಣಿಜ್ಯ ತೆರಿಗೆ ಪೈಕಿ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯೂ ಸೇರ್ಪಡೆಗೊಳ್ಳುತ್ತದೆ. ಈ ಬಾರಿ ವಾಣಿಜ್ಯ ತೆರಿಗೆ ರೂಪದಲ್ಲಿ ಆದಾಯ ಸಂಗ್ರಹ ಉತ್ತಮವಾಗಿದೆ. ಬಜೆಟ್ ಅಂದಾಜಿಗಿಂತಲೂ ಉತ್ತಮ ಸಾಧನೆ ಕಾಣುವಲ್ಲಿ ವಾಣಿಜ್ಯ ಇಲಾಖೆ ಸಫಲವಾಗಿದೆ. ಲಾಕ್ಡೌನ್ ನಿರ್ಬಂಧಗಳ ಮಧ್ಯೆ ವಾಣಿಜ್ಯ ತೆರಿಗೆ ಮೂಲಕ ಉತ್ತಮ ರಾಜಸ್ವ ಸಂಗ್ರಹ ಮಾಡುವಲ್ಲಿ ಸರ್ಕಾರ ಯಶ ಕಂಡಿದೆ.
1 ಲಕ್ಷ ಕೋಟಿ ರೂ. ಗಡಿ ದಾಟಿದ ವಾಣಿಜ್ಯ ತೆರಿಗೆ : ಮಾ. 2021-22ರಲ್ಲಿ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಉತ್ತಮ ಚೇತರಿಕೆ ಕಂಡಿದೆ. ಜಿಎಸ್‌ಟಿ ನಷ್ಟ ಪರಿಹಾರ ಸೇರಿದಂತೆ ಈ ಬಾರಿ ವಾಣಿಜ್ಯ ತೆರಿಗೆ ಸಂಗ್ರಹದ ಗುರಿ 76,473 ಕೋಟಿ ರೂ. ಆಗಿತ್ತು. ಆದರೆ, ಈ ಬಾರಿ ಮಾರಾಟ ತೆರಿಗೆ ಸೇರಿದಂತೆ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹ ಗುರಿ ಒಂದು ಲಕ್ಷ ಕೋಟಿ ರೂ. ಗಡಿ ದಾಟಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಂಕಿ-ಅಂಶ ನೀಡಿದೆ.
ಆರ್ಥಿಕ ವರ್ಷದ ಕೊನೆ ತಿಂಗಳಾದ ಮಾರ್ಚ್‌ನಲ್ಲಿ 7,607.34 ಕೋಟಿ ರೂ. ಜಿಎಸ್‌ಟಿ ಸಂಗ್ರಹ ಮಾಡಲಾಗಿದೆ. ಅಂದರೆ ಮಾರ್ಚ್ ಅಂತ್ಯಕ್ಕೆ ಜಿಎಸ್‌ಟಿ ರೂಪದಲ್ಲಿ 77,715.68 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಅದೇ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ರೂಪದಲ್ಲಿ ಸುಮಾರು 1,414 ಕೋಟಿ ರೂ. ತರಿಗೆ ಸಂಗ್ರಹ ಮಾಡಿದೆ. ಅಂದರೆ ಮಾರಾಟ ತೆರಿಗೆ ರೂಪದಲ್ಲಿ ಒಟ್ಟು 19,041 ಕೋಟಿ ರೂ. ಭರ್ಜರಿ ಆದಾಯ ಸಂಗ್ರಹ ಮಾಡಲಾಗಿದೆ. ಆ ಮೂಲಕ 2021-22 ಅಂತ್ಯಕ್ಕೆ ವಾಣಿಜ್ಯ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ತೆರಿಗೆ ಸಂಗ್ರಹ ಮಾಡಿದಂತಾಗಿದೆ.
5 ವರ್ಷ ಕಳೆದರೂ ನೀಗದ ತೆರಿಗೆ ಕೊರತೆ :ಜಿಎಸ್‌ಟಿ ಜಾರಿಯಾಗಿ 2021-22ಕ್ಕೆ ಐದು ವರ್ಷ ಪೂರೈಸುತ್ತದೆ. ಜಿಎಸ್‌ಟಿ ಪದ್ಧತಿ ಜಾರಿಯಾಗುವುದರಿಂದ ರಾಜ್ಯ ಅನುಭವಿಸುವ ತೆರಿಗೆ ನಷ್ಟ ಭರಿಸಲು ಕೇಂದ್ರ ಸರ್ಕಾರ ಐದು ವರ್ಷಗಳಿಗೆ ಜಿಎಸ್‌ಟಿ ನಷ್ಟ ಪರಿಹಾರ ನೀಡುತ್ತಿದೆ. ಈ ಜಿಎಸ್‌ಟಿ ನಷ್ಟ ಪರಿಹಾರ ಇದೇ ಜೂನ್‌ವರೆಗೆ ನೀಡಲಾಗುತ್ತದೆ. ಬಳಿಕ ನಷ್ಟ ಪರಿಹಾರ ಅಂತ್ಯವಾಗಲಿದೆ. ಇದೀಗ ನಷ್ಟ ಪರಿಹಾರದ ಕೊನೆಯ ವರ್ಷ ದಾಟಿದರೂ ತೆರಿಗೆ ಸಂಗ್ರಹದ ಕೊರತೆ ಮಾತ್ರ ನೀಗಿಲ್ಲ.