ಬೆಂಗಳೂರು :ನೈರುತ್ಯ ಮುಂಗಾರು ವಾಡಿಕೆಗಿಂತ ಒಂದು ವಾರ ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮೇ 3ನೇ ವಾರದವರೆಗೂ ಚೇತರಿಕೆಯಲ್ಲಿದ್ದ ಮಳೆ ಕೊನೆಯ ವಾರದಲ್ಲಿ ಕ್ಷೀಣಿಸಿದೆ. ಮೇ 27ರ ವೇಳೆಗೆ ಮುಂಗಾರು ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ, ಈತನಕ ಅಂತಹ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಜೂನ್ 10ರ ವೇಳೆಗೆ ಮುಂಗಾರು ಚುರುಕಾಗಲಿದೆ ಎನ್ನಲಾಗುತ್ತಿದೆ.
ಬದಲಿಗೆ ಮಳೆಯ ಪ್ರಮಾಣ ಇಳಿಮುಖವಾಗಿ ಒಣಹವೆ ಹೆಚ್ಚಾಗಿ ಕಂಡು ಬರುತ್ತಿದೆ. ಚಂಡಮಾರುತದ ಬೆನ್ನಲ್ಲೇ ಮೇ ತಿಂಗಳಿನಲ್ಲಿ ಎರಡು ವಾರಗಳ ಕಾಲ ಕುಂಭದ್ರೋಣ ಮಳೆಯಾಗಿ ರಾಜಧಾನಿ ಸೇರಿದಂತೆ ಹಲವು ನಗರಗಳಲ್ಲಿ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಅಪಾರ ಪ್ರಮಾಣದ ಬೆಳೆ, ಆಸ್ತಿಪಾಸ್ತಿ ಹಾನಿಯೂ ಉಂಟಾಗಿತ್ತು.
ಬೇಸಿಗೆಯಲ್ಲೂ ಕೂಡ ತಂಪಾದ ವಾತಾವರಣ ನಿರ್ಮಾಣವಾಗುವ ರೀತಿಯಲ್ಲಿ ಎಡೆಬಿಡದೆ ನಿರಂತರ ಮಳೆಯಾಗಿತ್ತು. ಆ ಸಂದರ್ಭದಲ್ಲಿ ನೈರುತ್ಯ ಮುಂಗಾರು ವಾಡಿಕೆಗಿಂತ ಮುನ್ನ ಒಂದು ವಾರ ಕೇರಳವನ್ನು ಪ್ರವೇಶಿಸಿಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದ್ದರೂ ನೈರುತ್ಯ ಮುಂಗಾರು ಆರಂಭವಾಗಿಲ್ಲ.