ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ನ.11 ರಿಂದ ಕಟ್ಟುನಿಟ್ಟಿನ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ನ.11 ರಿಂದ ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ
ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಹಿನ್ನೆಲೆ ಗ್ರಾಮಾಂತರ ಜಿಲ್ಲೆಯಾದ್ಯಂತ ನ.11 ರಿಂದ ಕಟ್ಟುನಿಟ್ಟಿನ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಡಿಸಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ಚುನಾವಣಾ ವೇಳಾಪಟ್ಟಿಯಂತೆ ನ.11 ರಂದು ಚುನಾವಣಾ ಅಧಿಸೂಚನೆ ಹೊರಡಿಸಿ, ನಾಮಪತ್ರ ಸ್ವೀಕಾರ ಮಾಡಲಾಗುವುದು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನ.18 ಕೊನೆಯ ದಿನವಾಗಿದೆ. ನ.19 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ನ. 21 ಕೊನೆಯ ದಿನವಾಗಿದೆ. ಡಿ. 5 ರಂದು ಮತದಾನ ನಡೆಯಲಿದ್ದು, ಮಾದರಿ ನೀತಿ ಸಂಹಿತೆಯು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಜಾರಿಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು.
ಹೊಸಕೋಟೆ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ತಾಲ್ಲೂಕು ಕಚೇರಿಯು ಜಿಲ್ಲಾ ಚುನಾವಣಾಧಿಕಾರಿ ಕೇಂದ್ರ ಕಚೇರಿ ಕಾರ್ಯಸ್ಥಳವಾಗಿದೆ. ನಾಮಪತ್ರ ಇತ್ಯಾದಿ ಪ್ರಕ್ರಿಯೆಗಳು ಮಿನಿ ವಿಧಾನಸೌಧದ ಕಟ್ಟಡದಲ್ಲಿ ನಡೆಯಲಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 2,12,748 ಮತದಾರರಿದ್ದು, ಅದರಲ್ಲಿ 1,07,766 ಪುರುಷ ಮತದಾರರು, 1,04,956 ಮಹಿಳಾ ಮತದಾರರು ಹಾಗೂ 26 ಇತರೆ ಮತದಾರರಿದ್ದಾರೆ. ಬಿ.ಇ.ಎಲ್ ಸಂಸ್ಥೆಯ ಎಂ3 (ಒ3) ಮಾದರಿಯ ಇ.ವಿ.ಎಂ ಗಳನ್ನು ಬಳಸಿ ಉಪಚುನಾವಣೆ ನಡೆಸಲಾಗುವುದು ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.