ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ನನಗೆ ಮುಖ್ಯ ಸಚೇತಕ ಹುದ್ದೆ ನೀಡೋದಾಗಿ ಹೇಳಿದ್ದರು. ಆದ್ರೆ ಸಮ್ಮಿಶ್ರ ಸರ್ಕಾರ ರಚನೆಯಾದ ಕಾರಣ ಆ ಅವಕಾಶ ತಪ್ಪಿತು ಎಂದು ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಸಕರ ಭವನದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದು ಸಿಎಂಗೆ ಬಿಟ್ಟ ವಿಚಾರ. ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಿದ್ದರಾಮಯ್ಯ ಅವರ ಬಳಿ ಒಮ್ಮೆ ವಿಚಾರಿಸಿದಾಗ, ಮುಂದಿನ ಅವಧಿಯಲ್ಲಿ ಮುಖ್ಯ ಸಚೇತಕ ಹುದ್ದೆ ನೀಡುವ ಭರವಸೆ ಸಿಕ್ಕಿತ್ತು. ಆದರೆ ಕಾಂಗ್ರೆಸ್ಗೆ ಸಂಪೂರ್ಣ ಬಹುಮತ ಸಿಗದ ಕಾರಣ ಈ ಅವಕಾಶ ಕೈತಪ್ಪಿದೆ ಎಂದರು.
ನಾನು ವಿಧಾನ ಪರಿಷತ್ ಸದಸ್ಯನಾಗಿ ನನ್ನ ಕಾರ್ಯವನ್ನು ನಡೆಸಿಕೊಂಡು ಸಾಗಿದ್ದೇನೆ. ನಮ್ಮಲ್ಲಿ ಅನೇಕ ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಹಿರಿಯ ರಾಜಕಾರಣಿಗಳ ನಡುವೆ ನಾನು ಪೈಪೋಟಿಗಿಳಿಯಲು ಇಚ್ಚಿಸುವುದಿಲ್ಲ. ಶಾಸಕನಾಗಿ ಜನ ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದಾರೆ, ಅವರ ಸೇವೆ ಮುಂದುವರಿಸುತ್ತೇನೆ ಎಂದರು.