ಬೆಂಗಳೂರು:ಮಾನಸಿಕವಾಗಿ ಬಿಜೆಪಿ ಪಾಳಯಕ್ಕೆ ಒಂದು ಹೆಜ್ಜೆ ಇರಿಸಿರುವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಎರಡನೇ ಹೆಜ್ಜೆಯನ್ನು ಇರಿಸಲು ಜೆಡಿಎಸ್ ಅವಕಾಶ ಮಾಡಿಕೊಟ್ಟಿದೆ.
ಕಳೆದ ಆರೇಳು ತಿಂಗಳಿಂದ ಬಿಜೆಪಿ ಪಾಳಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪುಟ್ಟಣ್ಣ, ಸರಿಸುಮಾರು ಒಂದೂವರೆ ವರ್ಷಗಳ ಹಿಂದಿನಿಂದಲೇ ಜೆಡಿಎಸ್ನಿಂದ ದೂರವಾಗುವ ಸೂಚನೆ ನೀಡುತ್ತಾ ಬಂದಿದ್ದರು. ಕೊನೆಗೂ ಬುಧವಾರ ಜೆಡಿಎಸ್ ಅವರನ್ನು ಉಚ್ಛಾಟನೆಗೊಳಿಸುವ ಮೂಲಕ ತನ್ನ ನಿರ್ಧಾರ ಪ್ರಕಟಿಸಿದೆ.
ಈ ಕಾರ್ಯದಲ್ಲಿ ಜೆಡಿಎಸ್ ಇನ್ನೂ ಕೆಲ ದಿನ ವಿಳಂಬ ಮಾಡಿದರೂ, ಪಕ್ಷ ಬಿಡುವ ಘೋಷಣೆ ಪುಟ್ಟಣ್ಣ ಮಾಡುವವರಿದ್ದರು. ಈ ವಿಚಾರದಲ್ಲಿ ಜೆಡಿಎಸ್ ಸಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಇತ್ತೀಚೆಗಷ್ಟೇ ಪಕ್ಷ ಬಿಡುವುದಾಗಿ ಹೇಳಿಕೆ ನೀಡಿದ್ದ ಪುಟ್ಟಣ್ಣ, 2020ರ ವೇಳೆಗೆ ಮೂರನೇ ಅವಧಿಯ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಪೂರ್ಣಗೊಳಿಸಲಿದ್ದರು. ಸದ್ಯ ಇವರ ಉಚ್ಛಾಟನೆಯಿಂದ ಪಕ್ಷದಿಂದ ಅವರು ದೂರವಾದರೂ, ವಿಧಾನ ಪರಿಷತ್ ಸದಸ್ಯತ್ವ ಉಳಿದುಕೊಳ್ಳಲಿದೆ. ಜೂನ್ 2020ರಲ್ಲಿ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಇವರು ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಪರೋಕ್ಷವಾಗಿ ಪುಟ್ಟಣ್ಣ ಇದನ್ನು ಒಪ್ಪಿಕೊಂಡಿದ್ದಾರೆ ಕೂಡ. ಜೆಡಿಎಸ್ ಪಕ್ಷದ ವರ್ಚಸ್ಸಿಗೆ ಇಂತಹ ವೈಯಕ್ತಿಕ ವರ್ಚಸ್ಸಿನ ಮೇಲೆ ನಾನು ಶಿಕ್ಷಕರ ಮನಗೆದ್ದು ಮೂರು ಬಾರಿ ಆಯ್ಕೆಯಾಗಿದ್ದೇನೆ. ಇಂದಿನ ಮತದಾರರು ಸಾಕಷ್ಟು ಬುದ್ಧಿವಂತರೆಂದು ಪಕ್ಷಕ್ಕಿಂತ ವ್ಯಕ್ತಿಯನ್ನ ಸೂಕ್ಷ್ಮವಾಗಿ ಗಮನಿಸಿ ಆರಿಸಿ ತರುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ನಾಲ್ಕನೇ ಸಾರಿ ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬರುವ ನನ್ನ ಕನಸು ಯಾವುದೇ ಪಕ್ಷದಲ್ಲಿದ್ದರೂ ಈಡೇರಲಿದೆ ಎಂಬ ವಿಶ್ವಾಸದ ಮಾತನ್ನಾಡಿದ್ದಾರೆ.
ರಮೇಶ್ ಆಪ್ತ ಬಳಗ
ಕಾಂಗ್ರೆಸ್ ಪಕ್ಷ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಅತೃಪ್ತಗೊಂಡಿದ್ದ ಗೋಕಾಕ್ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಕಳೆದ ಆರೇಳು ತಿಂಗಳಿಂದ ಗುರುತಿಸಿಕೊಂಡಿರುವ ಪುಟ್ಟಣ್ಣ, ಮುಂದಿನ ದಿನಗಳಲ್ಲಿ ರಮೇಶ್ ನೇತೃತ್ವದಲ್ಲಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿಯೇ ಇವರು ಸಾಕಷ್ಟು ಸಾರಿ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬ ಆರೋಪವನ್ನು ಮೇಲಿಂದ ಮೇಲೆ ಮಾಡಿದ್ದ ಅವರು, ಪಕ್ಷದ ಹಲವು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಶೀಘ್ರವೇ ಬೇರೆ ಪಕ್ಷಗಳಲ್ಲಿ ನೆಲೆಕಂಡುಕೊಳ್ಳಲಿದ್ದಾರೆ ಎಂದಿದ್ದರು.
ಬುಧವಾರ ತಮ್ಮನ್ನು ಪಕ್ಷದಿಂದ ಉಚ್ಛಾಟಿಸಿದ ಸಂದರ್ಭದಲ್ಲಿ ಕೂಡ, ಹಲವು ಶಾಸಕರು ಜೆಡಿಎಸ್ ತೊರೆಯಲು ಸಿದ್ಧವಾಗಿದ್ದಾರೆ. ಸೂಕ್ತ ಕಾಲ ಕೂಡಿ ಬರಬೇಕಿದೆ. ಹಾಲಿ ಶಾಸಕರು, ಮಾಜಿ ಸಚಿವರು ಹಾಗೂ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಪ್ತವಲಯದಲ್ಲಿ ಗುರುತಿಸಿಕೊಂಡ ಹಲವು ಮುಖಂಡರು ಬಿಜೆಪಿ ಹಾಗೂ ಹಾಗೂ ಕಾಂಗ್ರೆಸ್ನತ್ತ ಮುಖ ಮಾಡಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಒಟ್ಟಾರೆ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಗುರುತಿಸಿಕೊಂಡಿದ್ದ ಜೆಡಿಎಸ್ಗೆ ನೆಲೆ ಇಲ್ಲದಂತಾಗಲಿದೆ ಎಂದು ಭವಿಷ್ಯ ನುಡಿದಿರುವ ಪುಟ್ಟಣ್ಣ ಶೀಘ್ರವೇ ಬಿಜೆಪಿ ಸೇರ್ಪಡೆಯಾಗಲಿದ್ದು ಮುಂಬರುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಮಲ ಹಿಡಿದು ಸ್ಪರ್ಧಿಸಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಸಾಕಷ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಬಿಜೆಪಿ ಸೇರಲಿದ್ದು, ಇವರನ್ನು ಕರೆತರಲು ಮುಂದಾಗಿರುವ ರಮೇಶ್ ಜಾರಕಿಹೊಳಿ ಜೊತೆ ಪುಟ್ಟಣ್ಣ ಕೂಡ ಕೈಜೋಡಿಸಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸುವ ಕಾರ್ಯದಲ್ಲಿ ಇವರು ಮುಂದಿನ ದಿನಗಳಲ್ಲಿ ಮಾಜಿ ಸಚಿವ ಸಿಪಿ ಯೋಗೀಶ್ವರ್ ಅವರೊಂದಿಗೆ ತೊಡಗಿಕೊಳ್ಳಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಪುಟ್ಟಣ್ಣ ಅವರೇ ಹೇಳುವಂತೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ರಾಜಕೀಯ ಬದಲಾವಣೆ ಆಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.