ಬೆಂಗಳೂರು: ಪದವಿ ಕಾಲೇಜುಗಳ ಸಹಾಯಕ ಹಾಗೂ ಸಹ ಪ್ರಾಧ್ಯಾಪಕರ ನಿಯೋಜನೆ ರದ್ದು ಹಾಗೂ ಕಡ್ಡಾಯ ವರ್ಗಾವಣೆ ವಿರೋಧಿಸಿ ವಿಧಾನಪರಿಷತ್ನ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ಇಂದು ವಿಕಾಸಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್. ಅಶ್ವತ್ಥನಾರಾಯಣ್ ಅವರ ಕಚೇರಿ ಬಳಿ ಕುಳಿತು ಧರಣಿ ನಡೆಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಲೇಜು ಶಿಕ್ಷಣ ಇಲಾಖೆಯಲ್ಲಿನ ಸುಮಾರು 1500ಕ್ಕೂ ಹೆಚ್ಚು ಸಹಾಯಕ ಹಾಗೂ ಸಹ ಪ್ರಾಧ್ಯಾಪಕರನ್ನು ಕಳೆದ 6-7 ವರ್ಷಗಳಿಂದ ಪೂರ್ಣ ಕಾರ್ಯಭಾರದಲ್ಲಿ ನಿಯೋಜನೆ ಮಾಡಲಾಗಿತ್ತು. ಈ ನಿಯೋಜನೆಯನ್ನು ಏಪ್ರಿಲ್ 30 ರಂದು ಮಧ್ಯರಾತ್ರಿ ರದ್ದುಪಡಿಸಿ, ಮೇ 4ರಂದು ಬಿಡುಗಡೆಗೊಂಡು, ಕೂಡಲೇ ಮೂಲ ಸ್ಥಾನದಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ. ನಂತರ ಸದರಿ, ಆದೇಶವನ್ನು ಮಾರ್ಪಡಿಸಿ, ಮೇ 10 ರಂದು ಬಿಡುಗಡೆಗೊಂಡು, ಮೂಲಸ್ಥಾನದಲ್ಲಿ ವರದಿ ಮಾಡಿಕೊಳ್ಳುವಂತೆ ಮೇ 3ರಂದು ಸಂಜೆ ಆದೇಶಿಸಲಾಗಿದೆ ಎಂದು ಹೇಳಿದರು.
ಈ ನಿಯೋಜನೆ ರದ್ದತಿ ಆದೇಶದಿಂದಾಗಿ ಕೆಲವು ಕಾಲೇಜುಗಳಲ್ಲಿ ಎಂ.ಬಿ.ಎ. ಕೋರ್ಸುಗಳನ್ನು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಪ್ರಾಧ್ಯಾಪಕರಿಗೆ ತುಂಬಾ ತೊಂದರೆ ಉಂಟಾಗಿದೆ. ನಿಯೋಜನೆ ರದ್ದು ತಾರತಮ್ಯ ಎಸಗಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಒಳಗಾಗಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಶಾಸಕರ ಸಭೆ ಕರೆದು ಚರ್ಚಿಸಿ ನಿಯೋಜನೆ ರದ್ದು ಮಾಡಬೇಕು ಎಂದು ಮರಿತಿಬ್ಬೇಗೌಡ ಆಗ್ರಹಿಸಿದರು.
ಪದವಿ ತರಗತಿಗಳಲ್ಲಿ ಪರೀಕ್ಷೆ ನಡೆಯುತ್ತಿದೆ ಹಾಗೂ ಮೌಲ್ಯಮಾಪನ ಪ್ರಾರಂಭವಾಗಿದೆ. ಏಳೆಂಟು ವರ್ಷಗಳಿಂದ ನಿಯೋಜನೆ ಮೇಲೆ ಇದ್ದ 1500ಕ್ಕೂ ಹೆಚ್ಚು ಮಂದಿ ಪ್ರಾಧ್ಯಾಪಕರ ನಿಯೋಜನೆ ರದ್ದು ಮಾಡಲಾಗಿದೆ. ಮಧ್ಯರಾತ್ರಿ ಈ ಆದೇಶ ಮಾಡಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಆಗಲಿದೆ. ಇವರು ಬಿಡುಗಡೆಗೊಂಡ ಬಳಿಕ ಇವರ ಸ್ಥಾನದಲ್ಲಿ ನಿಯೋಜನೆಗೊಂಡ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಾರೆ. ನಿಯೋಜನೆ ರದ್ದು ಮಾಡಿದ್ದರಿಂದ ಅವರ ಜಾಗಕ್ಕೆ ಮೂರು ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕಾಗುತ್ತದೆ. ನಿಯೋಜನೆ ರದ್ದು ಮಾಡಿ ಮೂಲ ಸ್ಥಾನಕ್ಕೆ ಕಳಿಸುವ ಬಗ್ಗೆ ವಿರೋಧ ಇಲ್ಲ, ಆದರೆ, ಹತ್ತಾರು ವರ್ಷಗಳಿಂದ ನಿಯೋಜನೆಗೊಂಡಿದ್ದ ಅಷ್ಟು ಜನರನ್ನು ಒಮ್ಮೆಲೆ ರದ್ದು ಮಾಡುವುದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.