ಬೆಂಗಳೂರು:ವಿಧಾನಪರಿಷತ್‌ನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳಿಗೆ ನಡೆಯುವ ಚುನಾವಣೆ ನಾಲ್ವರು ಪರಿಷತ್ ಸದಸ್ಯರ ಭವಿಷ್ಯ ನಿರ್ಧರಿಸಲಿದೆ.
ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಘಟಾನುಘಟಿ ಅಭ್ಯರ್ಥಿಗಳೇ ಕಣದಲ್ಲಿರುವ ವಿಧಾನಪರಿಷತ್ ಈ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ. ಚುನಾವಣೆಗಾಗಿ 549 ಮತಕೇಂದ್ರಗಳು ಹಾಗೂ 4 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ನಾಲ್ಕು ವಿಧಾನಪರಿಷತ್ ಕ್ಷೇತ್ರಗಳಾದ ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ಇದೀಗ ಚುನಾವಣೆ ನಡೆಯುತ್ತಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪುಟ್ಟಣ್ಣ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರವೀಣ್ ಪೀಟರ್ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಕಣದಲ್ಲಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಶೀಲ್ ನಮೋಶಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಶರಣಪ್ಪ ಮಟ್ಟೂರು ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ತಿಮ್ಮಯ್ಯ ಪುರ್ಲೆ ಅಭ್ಯರ್ಥಿಗಳಾಗಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚಿದಾನಂದಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮೇಶ್ ಬಾಬು ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಚೌಡರೆಡ್ಡಿ ಕಣದಲ್ಲಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಿದ್ದಲಿಂಗಪ್ಪ ವಿ ಸಂಕನೂರು, ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಎನ್.ಕುಬೇರಪ್ಪ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಬಸವರಾಜ್ ಗುರಿಕಾರ್ ಕಣದಲ್ಲಿದ್ದಾರೆ.
ಕ್ಷೇತ್ರವಾರು ಕೇಂದ್ರ:ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 69, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 187, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 147 ಮತ್ತು ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 146 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 22,261 ಮತದಾರರಿದ್ದು, 7,992 ಪುರುಷರು, 14,266 ಮಹಿಳೆಯರು ಮತ್ತು ಮೂವರು ಇತರೆ ಮತದಾರರು ಇದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 75,781 ಮತದಾರರಿದ್ದು, 48,584 ಪುರುಷರು, 27,186 ಮಹಿಳೆಯರು ಮತ್ತು 11 ಇತರೆ ಮತದಾರರಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 1.09 ಲಕ್ಷ ಮತದಾರರಿದ್ದು, 68,414 ಪುರುಷರು, 40,711 ಮಹಿಳೆಯರು ಮತ್ತು 4 ಇತರೆ ಮತದಾರರಿದ್ದಾರೆ.
ನಾಲ್ಕು ಮತ ಎಣಿಕೆ ಕೇಂದ್ರಗಳು:ನಾಳೆ ಮತದಾನ ನಡೆಯುವ ನಾಲ್ಕು ಕ್ಷೇತ್ರಗಳ ಮತ ಎಣಿಕೆ ನವೆಂಬರ್ 2ರಂದು ನಡೆಯಲಿದೆ. ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಮತ ಕ್ಷೇತ್ರದ ಮತ ಎಣಿಕೆಯು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದ್ದು, ಪ್ರತ್ಯೇಕವಾಗಿ ಎರಡು ಹಾಲ್‌ನಲ್ಲಿ ತಲಾ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.
ಪದವೀಧರ ಕ್ಷೇತ್ರದ ಮತ ಎಣಿಕೆಯು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಒಂದು ಹಾಲ್‌ನಲ್ಲಿ ಏಳು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯು ಕಲಬುರ್ಗಿ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ನಡೆಯಲಿದ್ದು, ಒಂದು ಹಾಲ್‌ನಲ್ಲಿ ಏಳು ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ಕಣದಲ್ಲಿ 40 ಅಭ್ಯರ್ಥಿಗಳು :ವಿಧಾನಪರಿಷತ್‌ನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ಚುನಾವಣಾ ಕಣದಲ್ಲಿ ಅಂತಿಮವಾಗಿ 40 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಮತ್ತು ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ನಾಲ್ಕು ಕ್ಷೇತ್ರದಲ್ಲಿ ಆಡಳಿತರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‌ನ ತಲಾ 4 ಅಭ್ಯರ್ಥಿಗಳು, ನೋಂದಾಯಿತ ಪಕ್ಷದಿಂದ 6 ಅಭ್ಯರ್ಥಿಗಳು ಮತ್ತು 22 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ದಾಖಲೆಗಳು:ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ ಹಾಜರುಪಡಿಸಲು ಸಾಧ್ಯವಾಗದಿದ್ದಲ್ಲಿ, ಪರ್ಯಾಯ ದಾಖಲೆ ಸಲ್ಲಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಮತ ಚಲಾಯಿಸಲು ಪರ್ಯಾಯ ದಾಖಲಾತಿಯಾದ ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಪಾನ್‌ಕಾರ್ಡ್, ಪಾಸ್‌ಪೋರ್ಟ್, ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ಸಂಸದರು, ಶಾಸಕರು ನೀಡಿದ ಅಧಿಕೃತ ಗುರುತಿನ ಚೀಟಿ, ಪದವಿಪ್ರಮಾಣ ಪತ್ರ, ವಿಕಲಚೇತನರ ಪ್ರಮಾಣ ಪತ್ರವನ್ನು ಸಹ ಹಾಜರುಪಡಿಸಿ ಮತದಾನ ಚಲಾಯಿಸಬಹುದಾಗಿದೆ.
ಎಡಗೈನ ತೋರು ಬೆರಳಿಗೆ ಶಾಹಿ:ಮತದಾನದ ದಿನದಂದು ಮತದಾರರಿಗೆ ಎಡಗೈನ ತೋರು ಬೆರಳಿಗೆ ಶಾಹಿ ಹಚ್ಚಲು ಚುನಾವಣಾ ಆಯೋಗ ಸೂಚನೆ ನೀಡಿದೆ. ಮತ ಕೇಂದ್ರಕ್ಕೆ ಬರುವ ಮತದಾರರಿಗೆ ಮತದಾನ ಮಾಡಿರುವ ಗುರುತಿಗಾಗಿ ಹಾಕಲಾಗುವ ಶಾಹಿಯನ್ನು ಎಡಗೈನ ತೋರು ಬೆರಳಿಗೆ ಹಾಕಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕ್ಷೇತ್ರ ವ್ಯಾಪ್ತಿ:ಒಟ್ಟು 3 ಲೋಕಸಭಾ ಕ್ಷೇತ್ರಗೆ ಬರುವ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 23 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 23 ಕ್ಷೇತ್ರಗಳಲ್ಲಿ 19 ಬಿಜೆಪಿ ಶಾಸಕರಿದ್ದಾರೆ. 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮೂರೂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿದ್ದಾರೆ. ಮೂರು ಪಕ್ಷಗಳಿಂದ ತಲಾ ಒಬ್ಬರು ಮೇಲ್ಮನೆ ಸದಸ್ಯರಿದ್ದಾರೆ. ಇತರ 11 ಮತದಾರರು ಸೇರಿ ಒಟ್ಟು 75,774 ಮತದಾರರಿದ್ದಾರೆ. ಪುರುಷರು 48,580 ಹಾಗೂ 27,183 ಮಹಿಳಾ ಮತದಾರರಿದ್ದಾರೆ.