ಬೆಂಗಳೂರು:ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ. ವಾಯವ್ಯ, ದಕ್ಷಿಣ ಪದವೀಧರರ ಕ್ಷೇತ್ರ ಹಾಗೂ ವಾಯವ್ಯ, ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ರಾಜ್ಯದ 11 ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 417 ಮತಗಟ್ಟೆಗಳನ್ನು ತೆರೆಯಲಾಗಿದ್ದು, 49 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬುಧವಾರ (ಜೂನ್ 15) ರಂದು ಫಲಿತಾಂಶ ಹೊರಬರಲಿದೆ.
ದಕ್ಷಿಣ ಪದವೀಧರ ಕ್ಷೇತ್ರ: ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮೈ.ವಿ. ರವಿಶಂಕರ್, ಜೆಡಿಎಸ್‌ನ ಹೆಚ್.ಕೆ. ರಾಮು, ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಪಕ್ಷೇತರ ಪ್ರಸನ್ನ ಎನ್. ಗೌಡ ಸೇರಿದಂತೆ 19 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರ: ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನ ಬಸವರಾಜ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ ಸೇರಿದಂತೆ 7 ಅಭ್ಯರ್ಥಿಗಳು ಕಣದಲ್ಲಿದ್ದು, 17,973 ಶಿಕ್ಷಕರು ಮತದಾನದ ಹಕ್ಕು ಹೊಂದಿದ್ದಾರೆ.
ವಾಯವ್ಯ ಪದವೀಧರ ಕ್ಷೇತ್ರ: ಬಾಗಲಕೋಟೆ, ವಿಜಯಪುರ, ಬೆಳಗಾವಿ ವ್ಯಾಪ್ತಿಯ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹಣಮಂತ ನಿರಾಣಿ, ಕಾಂಗ್ರೆಸ್‌ನ ಸುನೀಲ ಸಂಕ ಸೇರಿದಂತೆ 11 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ, ಇಲ್ಲಿ 99,598 ಮತದಾರರು ಹಕ್ಕು ಚಲಾಯಿಸಲಿದ್ದಾರೆ.