ಬೆಂಗಳೂರು :ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಉಪಸಭಾಪತಿ, ಸಭಾನಾಯಕ ಗೆಲುವಿನ ನಗೆ ಬೀರಿದ್ದಾರೆ. ಮುಖ್ಯ ಸಚೇತಕ ಕವಟಗಿಮಠ ಭವಿಷ್ಯ ಮಾತ್ರ ಜಾರಕಿಹೊಳಿ ಕುಟುಂಬದ ರಾಜಕೀಯ ಪ್ರಹಸನದಿಂದಾಗಿ ಕಮರಿದೆ. ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಪರಿಷತ್ ಸ್ಥಾನದೊಂದಿಗೆ ಸಚೇತಕ ಸ್ಥಾನವನ್ನೂ ಕವಟಗಿಮಠ ಕಳೆದುಕೊಳ್ಳುತ್ತಿದ್ದಾರೆ.
ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಆಡಳಿತಾರೂಢ ಬಿಜೆಪಿಯಿಂದ ವಿಧಾನ ಪರಿಷತ್ನ ಮೂರು ಪ್ರಮುಖ ಸ್ಥಾನಗಳನ್ನು ನಿಭಾಯಿಸುತ್ತಿರುವವರು ಕಣಕ್ಕಿಳಿದು ಇದರಲ್ಲಿ ಮರು ಆಯ್ಕೆಯಾಗುವಲ್ಲಿ ಇಬ್ಬರು ಸಫಲರಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಉಪಸಭಾಪತಿ ಎಂ.ಕೆ ಪ್ರಾಣೇಶ್ 6 ಮತಗಳಿಂದ ರೋಚಕ ಗೆಲುವು ಸಾಧಿಸಿ ಉಪ ಸಭಾಪತಿ ಪೀಠವನ್ನು ಉಳಿಸಿಕೊಂಡಿದ್ದಾರೆ.
ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇತ್ತು. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹಾಗಾಗಿ, ಜೆಡಿಎಸ್ ಮತಗಳು ಪರಿಷತ್ನಲ್ಲಿನ ಮೈತ್ರಿಯಿಂದಾಗಿ ಬಿಜೆಪಿ ಕಡೆ ಅಲ್ಪ ಮಟ್ಟಿಗೆ ವಾಲಿ ಪ್ರಾಣೇಶ್ ಗೆದ್ದು ಬೀಗುವಂತಾಗಿದೆ ಎನ್ನಲಾಗುತ್ತಿದೆ.
ಪರಿಷತ್ ಸಭಾನಾಯಕನ ಸ್ಥಾನ ಅಬಾಧಿತ :ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮರು ಆಯ್ಕೆಯಾಗಿದ್ದಾರೆ. ಹಾಗಾಗಿ, ಪರಿಷತ್ ಸಭಾನಾಯಕರಾಗಿ ಕೋಟ ಮುಂದುವರೆಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿಸದಸ್ಯತ್ವವಿದ್ದು, ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ಇಬ್ಬರನ್ನು ಪರಿಷತ್ಗೆ ಆಯ್ಕೆ ಮಾಡಲಾಗಿದೆ.
ಇಲ್ಲಿ ಆಡಳಿತ ಪಕ್ಷ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ಕಾಂಗ್ರೆಸ್ನಿಂದ ಮಂಜುನಾಥ ಭಂಡಾರಿ ಸ್ಪರ್ಧಿಸಿದ್ದರು. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ, ಎಸ್‌ಡಿಪಿಐ ಮಾತ್ರ ಅಭ್ಯರ್ಥಿಯನ್ನು ಹಾಕಿದ್ದು, ಕೇವಲ ಮೂವರು ಮಾತ್ರ ಕಣದಲ್ಲಿ ಉಳಿದಿದ್ದರು.
ಹಾಗಾಗಿ, ನಿರೀಕ್ಷೆಯಂತೆ ಬಿಜೆಪಿ ಮತ್ತು ಕಾಂಗ್ರೆಸ್ನ ಇಬ್ಬರೂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಿಂದಾಗಿ ಮರು ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಪರಿಷತ್ ಸಭಾನಾಯಕರಾಗಿ ಅವರೇ ಮುಂದುವರೆಯಲಿದ್ದಾರೆ.