ಬೆಂಗಳೂರು:ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಎಂ. ನಾಗರಾಜ್ ಯಾದವ್ ಹಾಗೂ ಕೆ. ಅಬ್ದುಲ್ ಜಬ್ಬಾರ್ ಅವರು ಇಂದು ನಾಮಪತ್ರ ಸಲ್ಲಿಸಿದರು. ವಿಧಾನಸೌಧದಲ್ಲಿ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಅಭ್ಯರ್ಥಿಗಳಿಬ್ಬರು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಮುಖಂಡರಾದ ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕರ್ತರಿಗೆ ಟಿಕೆಟ್:ಈ ವೇಳೆ, ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ನಿಂದ ಇಬ್ಬರು ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದೇವೆ. ಇನ್ನೂ ಹಲವು ಕಾರ್ಯಕರ್ತರು ಇದ್ದರು. ಅವರಿಗೆ ಅಸಮಾಧಾನ ಆಗಿದೆ. ಕೇವಲ ಎರಡೇ ಸ್ಥಾನ ನಮಗೆ ಇತ್ತು. ಹಾಗಾಗಿ ಪಕ್ಷ ಇವರನ್ನು ಗುರುತಿಸಿದೆ. ಮುಂದೆ ಕಾರ್ಯಕರ್ತರ ಗುರುತಿಸುವ ಕೆಲಸ ಪಕ್ಷ ಮಾಡುತ್ತದೆ ಎಂದು ಹೇಳಿದರು.
ಮಹಿಳೆಯರಿಗೆ ಟಿಕೆಟ್ ಕೈತಪ್ಪಿದೆ. ಎಸ್ಸಿ ಮತ್ತು ಲಿಂಗಾಯತ ಸಮುದಾಯಕ್ಕೆ ಕೂಡ ಟಿಕೆಟ್ ತಪ್ಪಿದೆ. ಎರಡು ಸ್ಥಾನ ಇದ್ದ ಕಾರಣದಿಂದ ಸ್ವಲ್ಪ ಹಿನ್ನಡೆ ಆಗಿದೆ. ಮುಂದೆ ಎಲ್ಲ ಸರಿ ಮಾಡೋಣ ಎಂದು ಭರವಸೆ ನೀಡಿದರು.