ಕರ್ನಾಟಕ

karnataka

ETV Bharat / city

ವಿಧಾನ ಪರಿಷತ್ ಕದನ: ಮೂವರಿಗೆ ಅಗ್ನಿಪರೀಕ್ಷೆ, ಸಿಎಂ ಬೊಮ್ಮಾಯಿಗೆ ಸತ್ವ ಪರೀಕ್ಷೆ - ಕರ್ನಾಟಕ ಪರಿಷತ್ ಚುನಾವಣೆ

ಪ್ರಾಣೇಶ್, ಕೋಟಾ ಶ್ರೀನಿವಾಸ ಪೂಜಾರಿ, ಕಮಟಗಿಮಠ ಅವರಿಗೆ ಪರಿಷತ್ ಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದರೆ, ಸಿಎಂ ಬೊಮ್ಮಾಯಿ ಅವರಿಗೆ ಇದು ಸತ್ವ ಪರೀಕ್ಷೆಯಾಗಲಿದೆ.

cm
cm

By

Published : Nov 8, 2021, 6:05 PM IST

ಬೆಂಗಳೂರು:ಎರಡು ಕ್ಷೇತ್ರಗಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬೆನ್ನಲ್ಲೇ ವಿಧಾನ ಪರಿಷತ್​​ನ 25 ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ ಎದುರಾಗುತ್ತಿದೆ.

ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದ ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಉಪ ಸಭಾಪತಿ ಪ್ರಾಣೇಶ್, ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ್ ಕಮಟಗಿಮಠ ಸೇರಿ ಬಿಜೆಪಿಯ 7 ಸದಸ್ಯರು ಚುನಾವಣಾ ಅಗ್ನಿಪರೀಕ್ಷೆ ಎದುರಿಸಬೇಕಿದೆ.

ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ವಿಧಾನ ಪರಿಷತ್​​ನ ದ್ವೈವಾರ್ಷಿಕ ನಿವೃತ್ತಿ ಆವೃತ್ತಿಯಂತೆ ಮೂರನೇ ಒಂದು ಭಾಗದ ಸದಸ್ಯರು ನಿವೃತ್ತರಾಗಲಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ 25 ಸದಸ್ಯರು ನಿವೃತ್ತರಾಗುತ್ತಿದ್ದು, ಆ ಸ್ಥಾನಗಳಿಗೆ ಜನವರಿಯಲ್ಲಿ ಚುನಾವಣೆ ನಡೆಯಲಿದೆ.

ಶ್ರೀನಿವಾಸ ಪೂಜಾರಿ, ಪ್ರಾಣೇಶ್, ಕವಟಗಿಮಠ ಮತ್ತೆ ಸ್ಪರ್ಧೆ:

ಉಪ ಸಭಾಪತಿ ಪ್ರಾಣೇಶ್

ವಿಧಾನ ಪರಿಷತ್ ಸಭಾ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೋಟಾ ಶ್ರೀನಿವಾಸ ಪೂಜಾರಿ ಮರು ಆಯ್ಕೆ ಬಯಸಿದ್ದು, ಸಚಿವ ಸ್ಥಾನದಲ್ಲಿ ಮುಂದುವರೆಯಲು ಹಾಗೂ ಪರಿಷತ್​​ನಲ್ಲಿ ಸಭಾ ನಾಯಕರಾಗಿ ಮುಂದುವರೆಯಲು ಪುನರಾಯ್ಕೆ ಅಗತ್ಯವಿದೆ. ಹಾಗಾಗಿ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕೋಟಾ ಶ್ರೀನಿವಾಸ ಪೂಜಾರಿ

ಇನ್ನು ಇತ್ತೀಚೆಗಷ್ಟೇ ನಡೆದ ರಾಜಕೀಯ ವಿದ್ಯಮಾನಗಳಿಂದಾಗಿ ಪರಿಷತ್​​ನಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುರಿದುಬಿದ್ದಿದ್ದು, ಬಿಜೆಪಿ ಜೆಡಿಎಸ್ ದೋಸ್ತಿಯಾಗಿದೆ. ಪರಸ್ಪರ ಒಡಂಬಡಿಕೆ ಮಾಡಿಕೊಂಡು ಜೆಡಿಎಸ್​​ಗೆ ಸಭಾಪತಿ ಸ್ಥಾನ ಮತ್ತು ಬಿಜೆಪಿಗೆ ಉಪ ಸಭಾಪತಿ ಸ್ಥಾನ ಹಂಚಿಕೆ ಮಾಡಿಕೊಂಡಿದ್ದು, ಚಿಕ್ಕಮಗಳೂರಿನ ಎಂ.ಕೆ ಪ್ರಾಣೇಶ್ ಬಿಜೆಪಿ ಕೋಟಾದಡಿ ಉಪ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರ ಅವಧಿ ಕೂಡ ಮುಕ್ತಾಯಗೊಳ್ಳುತ್ತಿದ್ದು, ಚಳಿಗಾಲದ ಅಧಿವೇಶನದ ನಂತರ ಉಪ ಸಭಾಪತಿ ಸ್ಥಾನದಲ್ಲಿ ಮುಂದುವರೆಯಬೇಕಾದಲ್ಲಿ ಪ್ರಾಣೇಶ್ ಮತ್ತೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕಿದೆ. ಹಾಗಾಗಿ ಸ್ಥಳೀಯ ಸಂಸ್ಥೆಯಿಂದ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯಲು ಪ್ರಾಣೇಶ್ ಮುಂದಾಗಿದ್ದಾರೆ.

ಇವರ ಜೊತೆ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ್ ಕಮಟಗಿಮಠ ಕೂಡ ನಿವೃತ್ತರಾಗುತ್ತಿದ್ದು, ಈ ಹುದ್ದೆಯಲ್ಲಿ ಮುಂದುವರೆಯಬೇಕಾದಲ್ಲಿ ಮತ್ತೆ ಮರು ಆಯ್ಕೆಯಾಗಬೇಕಿದೆ. ಹಾಗಾಗಿ ಕವಟಗಿಮಠ ಕೂಡ ಮತ್ತೊಮ್ಮೆ ಸ್ಥಳೀಯ ಸಂಸ್ಥೆಯಿಂದ ಕಣಕ್ಕಿಳಿಯಲಿದ್ದಾರೆ.

ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ್ ಕಮಟಗಿಮಠ

ಪ್ರಾಣೇಶ್, ಕೋಟಾ ಶ್ರೀನಿವಾಸ ಪೂಜಾರಿ, ಮಹಾಂತೇಶ್ ಕವಟಗಿಮಠ ಜೊತೆ ಬಿಜಿ ಪಾಟೀಲ್, ಪ್ರದೀಪ್ ಶೆಟ್ಟರ್, ಸುನೀಲ್ ಸುಬ್ರಹ್ಮಣಿ ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ ಅಭಯ್ ಪಾಟೀಲ್ ಕೂಡ ಬಿಜೆಪಿ ಅಭ್ಯರ್ಥಿಗಳಾಗಿ ಸ್ಥಳೀಯ ಸಂಸ್ಥೆ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬೈ ಎಲೆಕ್ಷನ್ ಶಾಕ್:

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವ ಕಾರಣಕ್ಕೆ ಅನಾಯಾಸವಾಗಿ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎನ್ನವ ಲೆಕ್ಕಾಚಾರದಲ್ಲಿದ್ದ ಬಿಜೆಪಿ ಸದಸ್ಯರಿಗೆ ಇತ್ತೀಚೆಗೆ ನಡೆದ ಉಪ ಚುನಾವಣಾ ಫಲಿತಾಂಶ ಶಾಕ್ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ನಡೆದ ಮೊದಲ ಉಪ ಚುನಾವಣೆಯಲ್ಲಿ ತವರು ಜಿಲ್ಲೆಯಲ್ಲೇ ಬಿಜೆಪಿಗೆ ಮುಖಭಂಗವಾಗಿದೆ. ಇದು ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ.

ಯಡಿಯೂರಪ್ಪ ನಾಯಕತ್ವದಲ್ಲಿ ಎಲ್ಲ ಉಪ ಸಮರಗಳಲ್ಲಿ ಬಹುತೇಕ ಗೆದ್ದಿದ್ದ ಬಿಜೆಪಿ ಇದೀಗ ಬೊಮ್ಮಾಯಿ ನಾಯಕತ್ವದಲ್ಲಿ ಅಂತಹ ಪೈಪೋಟಿ ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಈ ಉಪ ಸಮರದ ಫಲಿತಾಂಶ ಸೂಚ್ಯವಾಗಿ ತಿಳಿಸಿದೆ. ಇದು ಬಿಜೆಪಿಯಿಂದ ಕಣಕ್ಕಿಳಿಯಲು ಮುಂದಾಗಿರುವ ಪರಿಷತ್ ಸದಸ್ಯರ ನಿದ್ದೆಗೆಡಿಸಿದೆ.

ದಿನೇ ದಿನೇ ಪ್ರತಿಪಕ್ಷ ರಾಜ್ಯದಲ್ಲಿ ಪ್ರಬಲವಾಗುತ್ತಿದೆ. ಕಾಂಗ್ರೆಸ್ ಬಿಜೆಪಿಗಿಂತ ಪರಿಣಾಮಕಾರಿಯಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಇದಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ಬಿಜೆಪಿ ಹಿಂದೆ ಉಳಿದಿದೆ. ಯಡಿಯೂರಪ್ಪ ನಂತರ ಅಂತಹ ನಾಯಕತ್ವ ತಕ್ಷಣಕ್ಕೆ ಲಭ್ಯವಾಗದಿರುವುದರಿಂದ ಜನವರಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​​ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಪ್ರಯಾಸದಾಯಕವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಪ್ರಾಣೇಶ್, ಕೋಟಾ ಶ್ರೀನಿವಾಸ ಪೂಜಾರಿ, ಕಮಟಗಿಮಠ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪರಿಷತ್​ನಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಬೇಕಾಗಿದೆ. ಹಾಗಾಗಿ ಚುನಾವಣೆ ಈ ಮೂವರು ಸದಸ್ಯರಿಗೆ ಅಗ್ನಿ ಪರೀಕ್ಷೆಯಾಗಿದೆ. ಇವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಪರಿಷತ್ ಚುನಾವಣೆ ಪ್ರತಿಷ್ಠೆಯಾಗಲಿದೆ. ಹಾನಗಲ್ ಸೋಲಿನ ನಂತರ ಎದುರಾಗುತ್ತಿರುವ ಪ್ರಶ್ನೆಗಳಿಗೆ ಪರಿಷತ್ ಚುನಾವಣೆ ಮೂಲಕ ಜನತೆ ತಮ್ಮ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಎಂದು ಹೈಕಮಾಂಡ್​​ಗೆ ಮನವರಿಕೆ ಮಾಡಿಕೊಡಬೇಕಿದೆ. ಆ ಮೂಲಕ ಮುಂದಿನ ಚುನಾವಣೆಗೆ ತಮ್ಮ ನಾಯಕತ್ವ ಅಬಾಧಿತ ಎಂದು ಸಿಎಂ ಬೊಮ್ಮಾಯಿ ಸಾಬೀತುಪಡಿಸಿಕೊಳ್ಳಬೇಕಿದೆ.

ABOUT THE AUTHOR

...view details