ಬೆಂಗಳೂರು/ಬೆಳಗಾವಿ :ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಮದ್ಯದ ಹೊಳೆ ಹರಿಯುತ್ತಿದೆ. ತನ್ನ ಆದಾಯಕ್ಕಾಗಿ ಈ ಪಿಡುಗನ್ನು ನೋಡಿಯೂ ಸರ್ಕಾರ ಸುಮ್ಮನಿದೆ ಎಂದು ಪಕ್ಷಭೇದ ಮರೆತು ಶಾಸಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಕಲಾಪದಲ್ಲಿ ನಡೆದಿದೆ.
ಪ್ರಶ್ನೋತ್ತರ ವೇಳೆಯಲ್ಲಿ ತುಕಾರಾಂ, ರೂಪಕಲಾ, ನಂಜೇಗೌಡ, ಎಂ.ಪಿ. ಕುಮಾರಸ್ವಾಮಿ ಸೇರಿದಂತೆ ಹಲವು ಶಾಸಕರು ಮಾತನಾಡಿದರು. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇಂದು ರಾಜ್ಯದ ಪ್ರತಿ ಜಿಲ್ಲೆಯ ಹಳ್ಳಿ-ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಆದರೆ, ಇದನ್ನು ನೋಡಿಯೂ ಸರ್ಕಾರ ಸುಮ್ಮನಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 1992ರಿಂದ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡಿಲ್ಲ ಎಂದು ಸರ್ಕಾರ ಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ 568 ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಮಾತ್ರ ಪರವಾನಿಗೆ ನೀಡಿರುವುದಾಗಿ ಹೇಳುತ್ತಿದೆ. ಆದರೆ, ಇಂದು ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ.
ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗುತ್ತಿದೆ ಎಂದರೆ ಪರಿಸ್ಥಿತಿ ಯಾವ ಮಟ್ಟದಲ್ಲಿ ಆತಂಕಕಾರಿಯಾಗಿದೆ ಎಂಬುದನ್ನು ಊಹಿಸಬಹುದು. ಹೀಗೆ ಎಲ್ಲ ಕಡೆ ಮದ್ಯ ಮಾರಾಟವಾಗುತ್ತಿರುವುದರಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ಸಂಸಾರಗಳು ಒಡೆದು ಹೋಗುತ್ತಿವೆ.
ಜನರ ಆರೋಗ್ಯ ಹದಗೆಟ್ಟು ಹೋಗುತ್ತಿದೆ. ಇವರು ನಿರ್ದಿಷ್ಟ ಜಾಗಗಳಿಂದ ನೂರು ಮೀಟರ್ ಅಂತರದಲ್ಲಿ ಮದ್ಯದಂಗಡಿಗಳು ಇರಬೇಕು ಎನ್ನುತ್ತಾರೆ. ಆದರೆ, ಅಂತಹ ಯಾವ ನಿಯಮವೂ ಜಾರಿಯಾಗುತ್ತಿಲ್ಲ. ಬೇಕಾದಲ್ಲಿ ಮದ್ಯ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.