ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಒಬ್ಬ ಪರಿಶುದ್ಧವಾದ ವ್ಯಕ್ತಿ. ಅವರ ಮೇಲಿನ ಕಮಿಷನ್ ಆರೋಪ ಶುದ್ಧ ಸುಳ್ಳು. ನಮ್ಮ ಸರ್ಕಾರದಲ್ಲಿ ಯಾರೂ ಕೂಡಾ ಕಮಿಷನ್ ತಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಮೇಲಿನ ಕಮಿಷನ್ ಆರೋಪ ಆಧಾರರಹಿತ. ಕಾಂಗ್ರೆಸ್ ನವರು ಪ್ರಚೋದನೆ ಮಾಡಿ ನಮ್ಮ ಸರ್ಕಾರ, ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮೇಲಿನ ಆರೋಪ ಶುದ್ಧ ಸುಳ್ಳು. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಎಲ್ಲ ಕ್ಷೇತ್ರದ ಶಾಸಕರಿಗೂ ಅನುದಾನ ನೀಡಲಾಗಿದೆ ಎಂದರು.
ಈಶ್ವರಪ್ಪ ಮನೆಯಲ್ಲಿ ನೋಟ್ ಎಣಿಸುವ ಮಷಿನ್ ಇಟ್ಟುಕೊಂಡ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಮನೆಯಲ್ಲಿ ನೋಟಿನ ಮಷಿನ್ ಇರಬಾರದು ಎಂದು ಕಾನೂನು ಇದ್ಯಾ?. ಅವರದ್ದು ಸ್ವಂತ ಬಿಸಿನೆಸ್ ಇದೆ. ಇದಕ್ಕಾಗಿ ಎಣಿಕೆ ಮಷಿನ್ ಇರಬಾರದಾ ಎಂದು ಮರುಪ್ರಶ್ನೆ ಹಾಕಿದರು.