ಬೆಂಗಳೂರು:ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಕಬಳಿಕೆ ಮಾಡುತ್ತಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ 4 ದಿನಗಳಲ್ಲಿ ಜಮೀನು ಮಂಜೂರು ಮಾಡಲಾಗುತ್ತಿದೆ. ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದರು.
ವಿಧಾನಸಭೆಯಲ್ಲಿ ನಿಯಮ 69ರ ಅಡಿ ಕಂದಾಯ ಇಲಾಖೆಯಲ್ಲಾಗುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ವಿಚಾರ ಪ್ರಸ್ತಾಪಿಸಿದ ಅವರು, ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಗ್ರಾಮದ ಸರ್ವೇ ನಂಬರ್ 195 ರ ಜಮೀನು ವಿವಾದಕ್ಕೆ 23-6-20 ರಂದು ಮರುವಿಚಾರಣೆಗೆ ಕೊಟ್ಟು ಅದೇ ದಿನದಂದು ಆದೇಶ ನೀಡಲಾಗಿದೆ. ಜಮೀನು ಮೂಲತಃ ಮಂಜೂರಾದ ಜಮೀನಾಗಿದ್ದು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಾಟ ಮಾಡಲಾಗಿದೆ ಎಂದರು.
2 ದಿನಗಳಲ್ಲಿ ಆದೇಶ ಹೊರಡಿಸಿರುವುದು ಸಂಶಯದಾಯಕವಾಗಿದೆ. ಇದು ಭೂಗಳ್ಳರ ಪರವಾದ ಆದೇಶವಾಗಿದೆ. ಹಳೆಯ ಕೈ ಬರಹದ ಆಧಾರದಲ್ಲಿ ಮುಂದಿನ ಕ್ರಮಕ್ಕೆ ವರದಿ ಮಾಡಿದ್ದಾರೆ. ಪೂರ್ವ ಕಚೇರಿಯಲ್ಲಿ ಮೂಲ ದಾಖಲೆ ಲಭ್ಯವಿಲ್ಲ ಎಂದು ಹೇಳಿದ್ದಾರೆ. ಪೂರ್ವ ತಾಲೂಕು ಕೆ.ಆರ್.ಪುರ ಹೋಬಳಿ, ಕ್ಯಾಲ್ಸನಳ್ಳಿ ಸರ್ವೇ ನಂಬರ್ 11 ರಲ್ಲಿ ನಾಲ್ಕು ಎಕರೆ ಜಮೀನನ್ನು ಕೂಡ ಇದೇ ರೀತಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.