ಬೆಂಗಳೂರು:ಉಳಿದ ಅವಧಿಗೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಹೇಳುವುದಲ್ಲ. ಅದನ್ನೇ ಪಕ್ಷದ ಶಾಸಕರು ಹೇಳುವಂತಾಗಬೇಕು ಎಂದು ಬಿಜೆಪಿ ಹಿರಿಯ ಶಾಸಕ ರಾಮದಾಸ್ ನೇರವಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ...ರೈತರ ಮನೆ ಬಾಗಿಲಿಗೆ ಬರಲು 'ಕೃಷಿ ಸಂಜೀವಿನಿ' ಸಂಚಾರಿ ವಾಹನ ಸಜ್ಜು: ಜ. 7ರಂದು ಲೋಕಾರ್ಪಣೆ
ಬಿಜೆಪಿ ಶಾಸಕರ ಜೊತೆಗಿನ ಮುಖ್ಯಮಂತ್ರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಎರಡೂವರೆ ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬ ಸಿಎಂ ಹೇಳಿಕೆ ವಿಚಾರ ಪ್ರಸ್ತಾಪಿಸಿದರು. ಮುಂದೆ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ತಾವು ಹೇಳುವುದಲ್ಲ. ಶಾಸಕರ ಸಮಸ್ಯೆ ಆಲಿಸಿ, ಅವರ ಬೇಡಿಕೆ ಈಡೇರಿಸಬೇಕು. ಕ್ಷೇತ್ರಕ್ಕೆ ಅನುದಾನ ನೀಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ಕೊಡಬೇಕು. ಈ ಮೂಲಕ ಸಿಎಂ ಬಿಎಸ್ವೈ ನಡೆಯನ್ನು ಶಾಸಕರು ಮೆಚ್ಚುವಂತಾಗಬೇಕು ಎಂದರು.
2008ರಲ್ಲಿ ಇದ್ದ ಆಡಳಿತ ವೈಖರಿ ಈಗ ಇಲ್ಲ ಅನಿಸುತ್ತಿದೆ. ಹೀಗಾಗಿ ಅದು ಬದಲಾಗಬೇಕು. ಪ್ರತಿಯೊಬ್ಬ ಶಾಸಕರ ವಿಶ್ವಾಸದೊಂದಿಗೆ ಆಡಳಿತ ನಡೆಸಬೇಕೇ ವಿನಾ ತಾವೇ ಮುಂದಿನ ಸಿಎಂ ಅಂತಾ ಹೇಳುವ ಮಾತಿನಲ್ಲಿ ಏನೂ ಅರ್ಥ ಬರುವುದಿಲ್ಲ. ಹೀಗಾಗಿ ಈ ಮಾತನ್ನು ಶಾಸಕರಿಂದ ಹೇಳಿಸಿದರೆ ಮಾತ್ರ ನಾಯಕತ್ವದ ಬಗ್ಗೆ ಒಂದು ಗತ್ತು ಬರುತ್ತದೆ. ಅದನ್ನು ಮುಖ್ಯಮಂತ್ರಿಗಳು ಮಾಡಬೇಕು ಎಂದು ಸಿಎಂ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ...'ನಾವು ಶಾಸಕರು ಏನೇ ಮಾತಾಡಿದ್ರೂ ಕಷ್ಟ'
ಮಧ್ಯವರ್ತಿಗಳ ಹಾವಳಿ ತಪ್ಪಿಸಿ:ಶಾಸಕರ ಕ್ಷೇತ್ರಗಳಿಗೆ ಅನುದಾನ ವಿಚಾರ ಕುರಿತು ಕೆಲ ಶಾಸಕರಿಂದ ಸಚಿವರ ವಿರುದ್ಧ ದೂರುಗಳ ಸುರಿಮಳೆ ಮುಂದುವರೆಯಿತು. ಕೆಲ ಸಚಿವರು ಮಧ್ಯವರ್ತಿಗಳು ಹೋದರೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಾರೆ. ಆದರೆ, ಶಾಸಕರು ಹೋದರೆ ಅನುದಾನ ಬಿಡುಗಡೆ ಮಾಡುವುದಿಲ್ಲ. ಅವರ ಪತ್ರಕ್ಕೂ ಕಿಮ್ಮತ್ತು ಕೊಡುವುದಿಲ್ಲ. ಹೀಗಿರುವಾಗ ಶಾಸಕರು ಹೇಗೆ ಅನುದಾನ ತೆಗೆದುಕೊಳ್ಳುವುದು? ಅದನ್ನು ತಪ್ಪಿಸಿ, ಸಂಬಂಧಿಸಿದ ಸಚಿವರಿಗೆ ನಿರ್ದೇಶನ ನೀಡಿ ಎಂದು ಸಭೆಯಲ್ಲಿ ಸಿಎಂಗೆ ಕೆಲ ಶಾಸಕರು ಒತ್ತಡ ಹಾಕಿದರು.