ಬೆಂಗಳೂರು: ಅನುದಾನ ಪಡೆಯುವ ವಿಚಾರದಲ್ಲಿ ವಿಧಾನಸಭೆ ಕಲಾಪದಲ್ಲಿಂದು ಸ್ವಾರಸ್ಯಕರ ಘಟನೆ ನಡೆದಿದೆ. ತಮ್ಮ ಕ್ಷೇತ್ರಕ್ಕೆ ಅನುದಾನ ಪಡೆಯುವ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಪ್ರಶ್ನೆ ಕೇಳಿದ ಬೇಲೂರು ಶಾಸಕ ಲಿಂಗೇಶ್, 2019-20ರಲ್ಲಿ ನನ್ನ ಕ್ಷೇತ್ರಕ್ಕೆ ಯಾವುದೇ ಯೋಜನೆ ಕೊಟ್ಟಿಲ್ಲ. ಕೆಲವು ಕ್ಷೇತ್ರಗಳಿಗೆ ಮಾತ್ರ ಕೊಟ್ಟಿದ್ದಾರೆ. ಸಿಎಂಜೆಸಿ ರೋಡ್ ಎಂದು ಇತ್ತು, ಅದು ಇಲ್ಲ. ಸುಮಾರ್ಗ ತಂದ್ರು, ಗ್ರಾಮ ವಿಕಾಸ ಯಾವುದೂ ಇಲ್ಲ ಎಂದು ಹೇಳಿದರು.
ಈಶ್ವರಪ್ಪನವರೇ ನಮ್ಮ ಮಗಳನ್ನು ನಿಮ್ಮ ಊರಿಗೆ ಕೊಟ್ಟಿರೋದು, ಆ ಕಾರಣಕ್ಕಾದ್ರೂ ದಯಮಾಡಿ ಅನುದಾನ ಕೊಡಿ - ಶಾಸಕ ಲಿಂಗೇಶ್ ಸಚಿವ ಈಶ್ವರಪ್ಪ ಅವರಿಗೆ ಕೈ ಜೋಡಿಸಿ ಕೇಳಿ ಕೊಳ್ಳುತ್ತೇನೆ. ಈಶ್ವರಪ್ಪನವರೇ ನಮ್ಮ ಮಗಳನ್ನು ನಿಮ್ಮ ಊರಿಗೆ ಕೊಟ್ಟಿರೋದು. ದಯಮಾಡಿ ಆ ಕಾರಣಕ್ಕಾದ್ರೂ ಅನುದಾನ ಕೊಡಿ.
ನಾವು ನೀವು ಸಂಬಂಧಿಕರು ಕಣ್ರೀ ಎಂದರು. ಈ ವೇಳೆ ಸಭೆ ನಗೆಗಡಲಲ್ಲಿ ತೇಲಿತು. ಆಗ ಮಧ್ಯ ಪ್ರವೇಶಿದ ಸ್ಪೀಕರ್ ಕಾಗೇರಿ, ಈ ಸಂಬಂಧದ ಕಾರಣದಿಂದ ಅಭಿವೃದ್ಧಿ ಕೆಲಸ ಕೊಡ್ತಾರೆ ಅಂತಾದ್ರೆ ಇಲ್ಲಿರೋ 224 ಜನನೂ ಸಂಬಂಧ ಬೆಳೆಸೋಕೆ ನೋಡ್ತಾರೆ ಎಂದರು.
ಸಚಿವ ಈಶ್ವರಪ್ಪ ಎದ್ದು ನಿಂತು, ನಮ್ಮ ಊರಲ್ಲಿ ಬಹಳ ಜನ ಗಂಡ್ಮಕ್ಕಳು ಇದ್ದಾರೆ. ಒಬ್ಬ ಹೆಣ್ಣಮಗಳನ್ನು ಕೊಟ್ಟರೆ ಹೇಗೆ. ನಿಮಗೆ ಮೂವರು ಹೆಣ್ಮಕ್ಕಳು ಅಲ್ವಾ?. ಅವರನ್ನೂ ನಮ್ಮ ಊರಿಗೆ ಕೊಟ್ಬಿಡಿ ಎಂದರು.
ನೀವು ಎಲ್ಲ ಶಿವಮೊಗ್ಗಕ್ಕೆ ತಗೊಂಡು ಹೋದರೆ ಬೇರೆ ಕಡೆಯ ಗಂಡು ಮಕ್ಕಳು ಏನು ಮಾಡಬೇಕು ಎಂದು ಸ್ಪೀಕರ್ ಕೇಳಿದರು. ಬೇರೆ ಕಡೆ ಹೆಣ್ಣು ಸಿಕ್ತಾ ಇಲ್ಲ ಅಂತ ಬಹಳ ಕಡೆ ಹೇಳ್ತಾರೆ. ನಮ್ಮ ಕಡೆ ಗಂಡುಗಳು ಜಾಸ್ತಿ ಇದ್ದಾರೆ. ಹಾಗಾಗಿ ಹೆಣ್ಣು ಕೊಡಿ ಅಂತ ಕೇಳ್ತಾ ಇದ್ದೀವಿ ಎಂದರು.