ಬೆಂಗಳೂರು :ಬದಲಾವಣೆ ಜಗದ ನಿಯಮ. ಯುಗಾದಿ ವೇಳೆಗೆ ಬದಲಾವಣೆ ಖಚಿತ. ಬದಲಾವಣೆಯಾಗದಿದ್ದಲ್ಲಿ ಅದನ್ನು ಯುಗಾದಿ, ಸಂಕ್ರಮಣ ಎಂದು ಯಾಕೆ ಕರೆಯಬೇಕು ಎಂದು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯುಗಾದಿಗೆ ಸಂಪುಟ ವಿಸ್ತರಣೆ ಆಗಲಿದೆ ಎಂದಿದ್ದಾರೆ.
ಸಿಎಂ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗಳನ್ನ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ದಿಲ್ಲಿಗೆ ಹೋಗುವ ಚಟ ಇದೆ. ಹಳೆಯ ಸ್ನೇಹಿತರಿದ್ದಾರೆ. ಅವರೊಂದಿಗೆ ಭೇಟಿ ಮಾಡಿ ಬರುತ್ತೇವೆ. ಸಂಪುಟ ಪುನಾರಚನೆ ಯಾವಾಗಾದರೂ ಮಾಡಲಿ. ಒಳ್ಳೆಯ ಆಡಳಿತ ನೀಡಲಿ ಎಂದು ಸಂಪುಟ ವಿಸ್ತರಣೆ ಕುರಿತು ಯತ್ನಾಳ್ ಹೇಳಿದರು.
ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿಜಯೇಂದ್ರ ಅವರಂಥ ದೊಡ್ಡ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಯುಗಾದಿ ಹೊತ್ತಿಗೆ ಬದಲಾವಣೆ ಆಗುತ್ತದೆ. ಬದಲಾವಣೆ ಜಗದ ನಿಯಮ ಎಂದರು.
ನಿರಾಣಿ ಪೀಠ :ಕೂಡಲಸಂಗಮ ಸ್ವಾಮೀಜಿ ನಮ್ಮ ಸಮುದಾಯದ ಪರವಾಗಿ ಹೋರಾಟ ಮಾಡಿದ್ದಾರೆ. ಸಮುದಾಯದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅವರ ಮಟ್ಟಕ್ಕೆ ಯಾವ ಪೀಠ ಬರುವುದಿಲ್ಲ. ಹರಿಹರ ಹಾಗೂ 3ನೇ ಪೀಠ ನಿರಾಣಿ ಪೀಠಗಳು. ಕೂಡಲಸಂಗಮ ಪೀಠ ಮಾತ್ರ ಪಂಚಮಸಾಲಿ ಸಮುದಾಯದ ಪೀಠ ಎಂದರು.