ಬೆಂಗಳೂರು: ನಗರದ ಸಾಮ್ರಾಟ್ ಆಭರಣ ಮಳಿಗೆಯಲ್ಲಿ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಆರೋಪಿಗಳನ್ನ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಆದ್ರೆ ಆರೋಪಿಗಳು ಸಾಮ್ರಾಟ್ ಚಿನ್ನದಂಗಡಿಯ ಶೂಟೌಟ್ ಪ್ರಕರಣದ ಮೊದಲ ದಿನ ವೈಯಾಲಿ ಕಾವಲ್ ಬಳಿ ಇರುವ ಎರಡು ಬೇರೆ ಬೇರೆ ಚಿನ್ನದಂಗಡಿಗೆ ಕನ್ನ ಹಾಕಿ ಅಲ್ಲಿ ಗ್ರಾಹಕರ ರೀತಿ ಎಂಟ್ರಿ ಕೊಟ್ಟು ಪರಿಶೀಲನೆ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಸಾಮ್ರಾಟ್ ಆಭರಣ ಮಳಿಗೆ ಮಿಸ್ ಫೈರಿಂಗ್ ವಿಡಿಯೋ ಹೌದು, ಆರೋಪಿಗಳು ಮಹಾರಾಷ್ಟ್ರ, ಹರಿಯಾಣದಿಂದ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟು ನಗರದ ಯಾವ ಜ್ಯುವೆಲ್ಲರಿಯಲ್ಲಿ ದರೋಡೆ ಮಾಡಬಹುದೆಂದು ಮೊದಲು ಸ್ಕೇಚ್ ಹಾಕಿದ್ದಾರೆ. ಹೀಗಾಗಿ ಸಾಮ್ರಾಟ್ ಜ್ಯುವೆಲ್ಲರಿ ಘಟನೆ ನಡೆಯುವ ಮೊದಲ ದಿನ ಅಕ್ಕ- ಪಕ್ಕ ಇರುವ ಅಂಗಡಿಗೆ ಮೂವರು ಆರೋಪಿಗಳು ಎಂಟ್ರಿ ಕೊಟ್ಟಿದ್ದಾರೆ. ಮೂವರು ಆರೋಪಿಗಳ ಪೈಕಿ ಒಬ್ಬ ಬ್ಯಾಗ್ ಹಾಕಿಕೊಂಡಿದ್ದರೆ, ಮತ್ತೊಬ್ಬ ಹೆಲ್ಮೆಟ್ ಧರಿಸಿ ಗ್ರಾಹಕನಂತೆ ಅಂಗಡಿಗೆ ಹೋಗಿ ಅಲ್ಲಿ ಚಿನ್ನಾಭರಣದ ಕುರಿತು ಮಾಹಿತಿ ಪಡೆದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ನಂತರ ಸಾಮ್ರಾಟ್ ಜ್ಯುವೆಲ್ಲರಿಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿ ಜ್ಯುವೆಲ್ಲರಿ ಮಾಲೀಕರಾದ ರಾಖಿ ಹಾಗೂ ಆಶಿಷ್ ಇಬ್ಬರೇ ಇರುವ ಕಾರಣ, ರಾಖಿಯವರ ಬಳಿ ಸಚಿನ್ ತೆಂಡೂಲ್ಕರ್ ಚೈನ್ ಕೇಳಿ ಮಿಸ್ ಫೈರ್ ಮಾಡಿದ್ದಾನೆ. ಈ ಕುರಿತಾದ ಎಲ್ಲ ಘಟನಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಇನ್ನು ವಿಚಾರಣೆ ವೇಳೆ ಆರೋಪಿಗಳ ಪೂರ್ವಾಪರ ಪತ್ತೆಯಾಗಿದ್ದು, ನಾಲ್ವರು ಆರೋಪಿಗಳು ಬೇರೆ ಬೇರೆ ರಾಜ್ಯದವರಾಗಿದ್ದಾರೆ. ಇಬ್ಬರು ರಾಜಸ್ಥಾನ, ಒಬ್ಬ ಹರಿಯಾಣ, ಇನ್ನೋರ್ವ ಮಹಾರಾಷ್ಟ್ರ ಮೂಲದವನಾಗಿದ್ದಾನೆ. ಆರೋಪಿಗಳ ಕಿಂಗ್‌ಪಿನ್ ಬಲವಾನ್ ಸಿಂಗ್ ಹರಿಯಾಣದವನಾಗಿದ್ದು, ಒಂದು ಕಾಲದಲ್ಲಿ ಅಹಮದಾಬಾದ್‌ನಲ್ಲಿ ಮಿಲಿಟರಿ ಯೋಧನಾಗಿದ್ದ. ರಜೆ ಮೇಲೆ ಊರಿಗೆ ಬಂದಿದ್ದಾಗ ಅಚಾತುರ್ಯವಾಗಿ ಜಮೀನು ವಿವಾದದ ವೇಳೆ ಕೈಯಲ್ಲಿದ್ದ ಗನ್‌ನಿಂದ ಒಬ್ಬನಿಗೆ ಗುಂಡು ಹಾರಿಸಿದ್ದ. ಈ ಸಂಬಂಧ ಬಲವಾನ್ ಸಿಂಗ್ ವಿಚಾರಣೆ ಸಹ ನಡೆದಿತ್ತು. ದೈಹಿಕವಾಗಿ ತುಂಬಾ ಬಲಹೀನನಾಗಿದ್ದ ಇವನನ್ನು ಸೇನೆಯಿಂದ ಕೈ ಬಿಡಲಾಗಿತ್ತು. ತದನಂತರ ಹಣಕ್ಕಾಗಿ ದರೋಡೆ ಮಾಡಲು ಪ್ಲ್ಯಾನ್ ಮಾಡಿ, ತನ್ನ ಸ್ನೇಹಿತರೊಂದಿಗೆ ಬೆಂಗಳೂರಿಗೆ ಬಂದಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.