ದೊಡ್ಡಬಳ್ಳಾಪುರ: ಊಟದ ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಲಕೆರೆ ಬಳಿಯ ಯೂರ್ಟನ್ ನಳಿ ನಿನ್ನೆ ರಾತ್ರಿ ನಡೆದಿದೆ.
ಪುಂಡರ ಗ್ಯಾಂಗ್ವೊಂದು ಡಾಬಾಕ್ಕೆ ಊಟಕ್ಕೆ ಬಂದಿತ್ತು. ಭಾನುವಾರ ರಾತ್ರಿ ಹತ್ತು ಗಂಟೆಗೆ ಡಾಬಾ ಕ್ಲೋಸ್ ಮಾಡಬೇಕಾದ ಹಿನ್ನೆಲೆ ಬಿಲ್ ಪಾವತಿ ಮಾಡುವಂತೆ ಸಪ್ಲೇಯರ್ ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಪುಂಡರು, ಸಪ್ಲೇಯರ್ಗೆ ಆವಾಜ್ ಹಾಕಿ, ಬಿಲ್ ಕೊಡದೆ ಅಲ್ಲಿಂದ ತೆರಳಿದ್ದಾರೆ.
ಡಾಬಾಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು ಬಿಲ್ ಕೊಡದೇ ತೆರಳಿದ್ದ ಆರೋಪಿಗಳು, ಮಧ್ಯರಾತ್ರಿ 12.30ರ ಸುಮಾರಿಗೆ ವಾಪಸ್ ಡಾಬಾ ಬಳಿ ಬಂದಿದ್ದಾರೆ. ಡಾಬಾ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ವೇಳೆ ಡಾಬಾದ ಒಳಗಿನ ರೂಮ್‌ನಲ್ಲಿ ಸಪ್ಲೇಯರ್ ಮನೋಜ್ ಎಂಬಾತ ಊಟ ಮಾಡುತ್ತಿದ್ದ. ಬೆಂಕಿ ಅವಘಡದಿಂದ ಮನೋಜ್ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಸೊಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.