ಬೆಂಗಳೂರು: ವಿಶ್ವ ಯಕೃತ್ತಿನ ದಿನಾಚರಣೆಯ ಸಂದರ್ಭದಲ್ಲಿ ತಮ್ಮವರಿಗಾಗಿ ತಮ್ಮ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದವರನ್ನು ಸನ್ಮಾನಿಸಲು ಬೆಂಗಳೂರಿನ ಆಸ್ಟರ್ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಯಕೃತ್ ದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ, ತಮ್ಮ ಯಕೃತ್ ದಾನ ಮಾಡಿದ ತೆರೆಮರೆಯ ವೀರರು ತಮ್ಮ ಸಂಘರ್ಷ ಮತ್ತು ಶೌರ್ಯದ ಕುರಿತಾದ ಹೃದಯಸ್ಪರ್ಶಿ ಕಥೆಗಳನ್ನು ಹಂಚಿಕೊಂಡರು.
ಇಷ್ಟಕ್ಕೂ ಜೀವಂತ ದಾನಿಗಳ ಯಕೃತ್ ಕಸಿ ಎನ್ನುವುದು ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಆರೋಗ್ಯವಂತ ವ್ಯಕ್ತಿಯಿಂದ ಯಕೃತ್ತಿನ ಒಂದು ಭಾಗವನ್ನು ತೆಗೆದು ಯಾರಿಗಾದರೂ ಕಸಿ ಮಾಡಲಾಗುತ್ತದೆ. ಈ ರೀತಿಯಾಗಿ ದಾನಿಯ ಉಳಿದ ಯಕೃತ್ ಮತ್ತೆ ಬೆಳೆಯುತ್ತದೆ ಮತ್ತು ಶಸ್ತ್ರಚಿಕಿತ್ಸೆಯಾಗಿ ಸ್ವಲ್ಪ ಸಮಯದ ನಂತರ ಅದರ ಸಾಮಾನ್ಯ ಗಾತ್ರ, ಪರಿಮಾಣ ಮತ್ತು ಸಾಮರ್ಥ್ಯ ಮರಳುತ್ತದೆ. ಹಾಗೆಯೇ, ಕಸಿ ಮಾಡಲಾದ ಯಕೃತ್ ಅದನ್ನು ಪಡೆದವರಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ ಮತ್ತು ಪುನಃ ಅದೇ ರೂಪ ಪಡೆಯುತ್ತದೆ.
ಭಾರತದಲ್ಲಿ ಜೀವಂತ ದಾನಿಗಳ ಯಕೃತ್ ಕಸಿಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯ ಕುರಿತು ಪ್ರತಿಕ್ರಿಯಿಸಿದ ಹೆಪಟೊಬಿಲಿಯರಿ ಮತ್ತು ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯ ತಜ್ಞ ಡಾ. ಸೋನಲ್ ಅಸ್ಥಾನಾ, ಜೀವಂತ ದಾನಿಗಳ ಯಕೃತ್ ಕಸಿಯ ಬಗ್ಗೆ ಜನರಿಗೆ ಇನ್ನೂ ತಿಳಿದಿಲ್ಲ. ಆ ಪ್ರಕ್ರಿಯೆಯು ಸಾಧ್ಯವಿಲ್ಲ ಎಂದು ಅನೇಕರು ಸಾಮಾನ್ಯವಾಗಿ ಗ್ರಹಿಸುತ್ತಾರೆ. ಜೀವಂತ ದಾನಿಗಳ ಯಕೃತ್ತಿನ ಕಸಿ ವ್ಯಾಪಕ ಪ್ರಯೋಜನ ನೀಡುತ್ತದೆ. ಇದು ಮೃತ-ದಾನಿಯ ಯಕೃತ್ತಿನ ಕಾಯುವಿಕೆಗೆ ಪರ್ಯಾಯವನ್ನು ನೀಡುತ್ತದೆ. ಕಸಿಗಾಗಿ ಕಾಯುತ್ತಿರುವಾಗ ಕೆಲವು ಸಂಭವನೀಯ ಆರೋಗ್ಯ ತೊಡಕುಗಳನ್ನು ತಪ್ಪಿಸಲು ಇದು ಸ್ವೀಕರಿಸುವವರಿಗೆ ಅವಕಾಶ ಕಲ್ಪಿಸುತ್ತದೆ. ಕಸಿ ಮಾಡಲು ಲಭ್ಯವಿರುವ ಅಂಗಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಜೀವಂತ ಮತ್ತು ಸತ್ತ ದಾನಿಗಳಿಂದ ಅಂಗಗಳ ಪೂರೈಕೆಯನ್ನು ಮೀರಿಸುತ್ತದೆ ಎಂದರು.
ಓದಿ:ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷದ ಬಾಲಕನಿಗೆ ಯಶಸ್ವಿ ಲಿವರ್ ಕಸಿ
ಹೃದಯ ಮತ್ತು ಶ್ವಾಸಕೋಶದಂತಹ ಇತರ ಕಸಿಗಳಿಗಿಂತ ಭಿನ್ನವಾಗಿ ಯಕೃತ್ತಿನ ಕಸಿ ಮಾಡಲು ಮೃತ-ದಾನಿಯ ಅಂಗಗಳಿಗೆ ಕಾಯಬೇಕಾಗಿಲ್ಲ. ಯಾರಾದರೂ, ಹತ್ತಿರದ ಕುಟುಂಬ ಸದಸ್ಯರು ಅಥವಾ ಸ್ನೇಹಿತರು ತಮ್ಮ ಯಕೃತ್ ದಾನ ಮಾಡಬಹುದು ಮತ್ತು ಅಮೂಲ್ಯವಾದ ಜೀವವನ್ನು ಉಳಿಸಬಹುದು. ಪಿತ್ತಜನಕಾಂಗದ ಒಂದು ಭಾಗವನ್ನು ದಾನ ಮಾಡುವುದು ದಾನಿಗಳಿಗೆ ಕಡಿಮೆ ಅಪಾಯಗಳನ್ನು ಹೊಂದಿದ್ದು, ಸ್ವೀಕರಿಸುವವರಿಗೆ ಇದು ಜೀವ ಉಳಿಸುವ ವಿಧಾನವಾಗಿದೆ ಎಂದರು.
ಹೆಸರಾಂತ ವಿಕೆಟ್ ಕೀಪರ್ ಡಾ. ಸೈಯದ್ ಕಿರ್ಮಾನಿ, ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಆಸ್ಟರ್‌ಗೆ ಧನ್ಯವಾದ ತಿಳಿಸಿ, ನಮ್ಮ ದೇಶದಲ್ಲಿ ಹೊಂದಿಕೆಯಾಗುವ ಅಂಗಾಂಗ ದಾನಿಗಳ ಅಲಭ್ಯತೆಯಿಂದ ಅನೇಕ ಜನರು ಯಕೃತ್ ವೈಫಲ್ಯದಿಂದ ಸಾವಿಗೆ ಶರಣಾಗಿದ್ದಾರೆ. ಅನೇಕರು ಇನ್ನೂ ಯಕೃತ್ತಿನ ಕಸಿಗಾಗಿ ಕಾಯುತ್ತಿದ್ದಾರೆ. ವಾರ್ಷಿಕವಾಗಿ ಸುಮಾರು 25-30 ಸಾವಿರ ಯಕೃತ್ತಿನ ಕಸಿ ಅಗತ್ಯವಿದೆ. ಆದರೆ ಸುಮಾರು ಒಂದು ಸಾವಿರದ ಐನೂರು ಮಾತ್ರ ನಡೆಸಲಾಗುತ್ತಿದೆ. ಹೀಗಾಗಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಇಂತಹ ಜಾಗೃತಿ ಕಾರ್ಯಕ್ರಮ ಬದಲಾವಣೆ ತರುತ್ತದೆ ಮತ್ತು ಅನೇಕ ಜನರು ತಮ್ಮ ಅಂಗಗಳನ್ನು ದಾನ ಮಾಡಲು ಮುಂದೆ ಬರುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ವಿಶ್ವ ಯಕೃತ್ತಿನ ದಿನದಂದು ಜನರು ತಮ್ಮ ಯಕೃತ್ತನ್ನು ಆರೋಗ್ಯವಾಗಿಡಲು ಮತ್ತು ಸದೃಢವಾಗಿರಲು ಉತ್ತೇಜಿಸಲು ನಾನು ಬಯಸುತ್ತೇನೆ ಎಂದು ಹೇಳಿದರು.
ಹಲವಾರು ರೋಗಿಗಳು ಒಟ್ಟಿಗೆ ಇಂದಿನ ಕಾರ್ಯಕ್ರಮದಲ್ಲಿ ಭಾಗವಾಗಿರುವುದನ್ನು ನೋಡಲು ನಮಗೆ ತುಂಬಾ ಸಂತೋಷವಾಗಿದೆ. ಈ ಕಾರ್ಯಕ್ರಮದ ಮೂಲಕ ಅನೇಕರಿಗೆ ಜೀವಂತ ದಾನಿಗಳ ಯಕೃತ್ತು ಕಸಿಯ ಬಗ್ಗೆ ಅರಿವು ಮೂಡುತ್ತದೆ. ಯಕೃತ್ತಿನ ಕಸಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಅಂತಾ ಆಸ್ಟರ್ ಆಸ್ಪತ್ರೆಗಳ ಹೆಪಟಾಲಜಿ ಮತ್ತು ಕಸಿ ವೈದ್ಯ ಡಾ. ಮಲ್ಲಿಕಾರ್ಜುನ ಸಕ್ಪಾಲ್ ಹೇಳಿದರು.
ಓದಿ:ಜೀರೋ ಟ್ರಾಫಿಕ್ ಮೂಲಕ 10 ನಿಮಿಷದಲ್ಲಿ ಲಿವರ್ ಸಾಗಣೆ
ಆಸ್ಟರ್ ಆಸ್ಪತ್ರೆಗಳ ಹೆಪಟಾಲಜಿ ಮತ್ತು ಕಸಿ ವೈದ್ಯ ಡಾ. ಅಪೂರ್ವ ಪಾಂಡೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಯಕೃತ್ತಿನ ಕಸಿ ಕ್ಷೇತ್ರದಲ್ಲಿ ನಾವು ಕ್ರಾಂತಿಕಾರಿ ಬದಲಾವಣೆಯನ್ನು ಕಂಡಿದ್ದೇವೆ. ಆದರೆ, ದಾನಿಗಳ ಕೊರತೆ ಸದಾ ಇದೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ, ಜೀವಂತ ದಾನಿಗಳ ಯಕೃತ್ತಿನ ಕಸಿ ಅಭಿವೃದ್ಧಿಪಡಿಸಲಾಗಿದೆ. ಮರಣಿಸಿದ ದಾನಿಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡುವುದರಿಂದ ಮತ್ತು ವೇಗವಾಗಿ ಚೇತರಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹಾಗೂ ಭಾರತದ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ವಿಕೆಟ್ ಕೀಪರ್ ಡಾ. ಸೈಯದ್ ಕಿರ್ಮಾನಿ ಮುಖ್ಯ ಅತಿಥಿಯಾಗಿದ್ದರು. ಹೆಪಟೊಬಿಲಿಯರಿ ಮತ್ತು ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯ ತಜ್ಞ ಡಾ. ಸೋನಲ್ ಅಸ್ಥಾನಾ, ಹೆಪಟೊಬಿಲಿಯರಿ ಮತ್ತು ಕಸಿ ಶಸ್ತ್ರಚಿಕಿತ್ಸೆ ವಿಭಾಗದ ತಜ್ಞ ಡಾ. ಕಾರ್ತಿಕ್ ಕೆ ರಾಯಚೂರಕರ್, ಹೆಪಟೊಬಿಲಿಯರಿ ಮತ್ತು ಕಸಿ ಶಸ್ತ್ರಚಿಕಿತ್ಸೆ ವಿಭಾಗ ತಜ್ಞ ಡಾ. ನಫೆನ್, ಹೆಪಟೊಬಿಲಿಯರಿ ಮತ್ತು ಕಸಿ ವೈದ್ಯ ಡಾ. ಮಲ್ಲಿಕಾರ್ಜುನ್ ಸಕ್ಪಾಲ್, ಹೆಪಟೊಬಿಲಿಯರಿ ಮತ್ತು ಕಸಿ ತಜ್ಞ ಡಾ. ಅಪೂರ್ವ ಪಾಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.