ಬೆಂಗಳೂರು: ಯುವತಿಗೆ ಕಿರುಕುಳ ನೀಡುತ್ತಿದ್ದ ಅಪ್ರಾಪ್ತನನ್ನು ನಾಲ್ವರು ಸೇರಿ ಕೊಲೆಗೈದಿರುವ ಘಟನೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಬನಶಂಕರಿ ನಿವಾಸಿ ಪ್ರಜ್ವಲ್ (17) ಕೊಲೆಯಾದವ. ನಾಗೇಂದ್ರ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಬನಶಂಕರಿಯಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಪ್ರಜ್ವಲ್ ದೂರದ ಸಂಬಂಧಿ ನಾಗೇಂದ್ರ ಅವರ ಸಹೋದರನ ಪುತ್ರಿಗೆ ಕರೆ ಮಾಡಿ, ಪ್ರೀತಿಸುವಂತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಈ ವಿಚಾರವನ್ನು ಯುವತಿ ತನ್ನ ಪಾಲಕರಿಗೆ ಹೇಳಿದ್ದಳು. ಈ ಬೆಳವಣಿಗೆಗಳಿಂದ ಕೆರಳಿದ ಯುವತಿಯ ಸಂಬಂಧಿ ನಾಗೇಂದ್ರ ಮತ್ತು ಆತನ ನಾಲ್ವರು ಸಹಚರರು, ಶುಕ್ರವಾರ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ನಿರ್ಜನ ಪ್ರದೇಶಕ್ಕೆ ಮಾತನಾಡಬೇಕೆಂದು ಪ್ರಜ್ವಲ್‌ನನ್ನು ಕರೆಸಿಕೊಂಡಿದ್ದರು. ಬಳಿಕ ಎಚ್ಚರಿಕೆ ನೀಡುವ ಭರದಲ್ಲಿ ದೊಣ್ಣೆಯಿಂದ ಪ್ರಜ್ವಲ್ ತಲೆಗೆ ಹೊಡೆದಿದ್ದಾರೆ.