ಬೆಂಗಳೂರು :27 ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರು ಸಚಿವರಾಗಿ ರಾಜಭವನದಲ್ಲಿಂದು ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು. ನೂತನ ಸಚಿವರ ಕುಟುಂಬ ಸದಸ್ಯರು, ಅಭಿಮಾನಿಗಳು ಪಾಲ್ಗೊಂಡು ಸಂತಸ ಹಂಚಿಕೊಂಡರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 29 ಸಚಿವರ ತಂಡ ರಚನೆಯಾಗಿದೆ. ಮೊದಲಿಗೆ ಗೋವಿಂದ ಕಾರಜೋಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕೆ ಎಸ್ ಈಶ್ವರಪ್ಪ, ಆರ್ ಅಶೋಕ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್ ಅಂಗಾರ, ಜೆ ಸಿ ಮಾಧುಸ್ವಾಮಿ, ಅರಗ ಜ್ಞಾನೇಂದ್ರ, ಡಾ ಸಿ ಎನ್ ಅಶ್ವತ್ಥ್ ನಾರಾಯಣ, ಸಿ ಸಿ ಪಾಟೀಲ್, ಆನಂದ್ ಸಿಂಗ್, ಕೋಟ ಶ್ರೀನಿವಾಸ್ ಪೂಜಾರಿ, ಪ್ರಭು ಚೌಹಾಣ್, ಮುರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್ ಟಿ ಸೋಮಶೇಖರ್, ಬಿ ಸಿ ಪಾಟೀಲ್, ಬೈರತಿ ಬಸವರಾಜ್, ಕೆ.ಸುಧಾಕರ್, ಕೆ.ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್, ನಾರಾಯಣಗೌಡ, ಬಿ ಸಿ ನಾಗೇಶ್, ವಿ.ಸುನಿಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ, ಮುನಿರತ್ನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಭು ಚೌಹಾಣ್ ಗೋಮಾತಾ ಹಾಗೂ ಸಂತ ಸೇವಾಲಾಲ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೆನಕೊಪ್ಪ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು, ಶಿವರಾಂ ಹೆಬ್ಬಾರ್, ಶಶಿಕಲಾ ಜೊಲ್ಲೆ ಕ್ಷೇತ್ರದ ಜನರ ಹೆಸರಿನಲ್ಲಿ, ಬಿ.ಸಿ ಪಾಟೀಲ್ ರೈತರು ಹಾಗೂ ಜಗಜ್ಯೋತಿ ಬಸವೇಶ್ವರ ಹೆಸರಿನಲ್ಲಿ ಪ್ರಮಾಣ ಸ್ವೀಕಾರ ಮಾಡಿದರು.
ಕೆ.ಎಸ್ ಈಶ್ವರಪ್ಪ, ವಿ.ಸುನಿಲ್ ಕುಮಾರ್ ಪ್ರಾಮಾಣವಚನ ಸ್ವೀಕರಿಸಿದ ನಂತರ ಅಭಿಮಾನಿಗಳು ಜೈಶ್ರೀರಾಮ್ ಹಾಗೂ ಆರ್ ಅಶೋಕ ಪ್ರಮಾಣ ವಚನ ಸಂದರ್ಭದಲ್ಲಿ ಸಾಮ್ರಾಟ್ ಎಂದು ಅವರ ಅಭಿಮಾನಿಗಳಿಗೆ ಘೋಷಣೆ ಕೂಗಿದರು.
ಇದನ್ನೂ ಓದಿ:ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದ ಕೆ ಎಸ್ .ಈಶ್ವರಪ್ಪನವರ ಕಿರು ಪರಿಚಯ
ಹೊಸ ಬಟ್ಟೆ, ಪಂಚೆಯಲ್ಲಿ ಮಿಂಚಿದ ನೂತನ ಸಚಿವರು
ಸಚಿವ ಪ್ರಭು ಚೌಹಾಣ್ ಲಂಬಾಣಿ ಉಡುಪನ್ನು ತೊಟ್ಟು ಸಚಿವರಾಗಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು. ಎಲ್ಲರೂ ಕೇಸರಿ ಶಾಲು ಹಾಕಿದ್ದರೆ, ಬಿ ಸಿ ಪಾಟೀಲ್ ಹಸಿರು ಶಾಲಿನಲ್ಲಿ ಕಾಣಿಸಿದರು.
ಸಚಿವ ಸುಧಾಕರ್, ಎಸ್ ಟಿ ಸೋಮಶೇಖರ್ ಹೊಸ ಪಂಚೆಯಲ್ಲಿ ಕಾಣಿಸಿದರು. ಸರಳ ವ್ಯಕ್ತಿತ್ವಕ್ಕೆ ಹೆಸರಾದ ಎಸ್ ಅಂಗಾರ ಪ್ಯಾಂಟ್, ಶರ್ಟ್ ನಲ್ಲಿ ಸಾಮಾನ್ಯರಂತೆ ಕುಳಿತಿದ್ದರು. ಇನ್ನು, ಉಳಿದಂತೆ ಬಹುಪಾಲು ಸಚಿವರು ಹೊಸ ಬಟ್ಟೆಯಲ್ಲಿ ಕಾಣಿಸಿದರು.
ಶಶಿಕಲಾ ಜೊಲ್ಲೆ ದೆಹಲಿಯಿಂದ ಬರಲು ವಿಳಂಬ; ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾರ್ಪಾಡು
ಶಾಸಕಿ ಶಶಿಕಲಾ ಜೊಲ್ಲೆ ಇಂದು ಬೆಳಗ್ಗೆ ದೆಹಲಿಯಿಂದ ಹೊರಟಿದ್ದು, ಅಷ್ಟರಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಪ್ರಾರಂಭವಾಯಿತು. ಝಿರೋ ಟ್ರಾಫಿಕ್ ನೀಡಿ ಸಚಿವ ಸ್ಥಾನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು.
ಪ್ರೊಟೊಕಾಲ್ ಪ್ರಕಾರ ಶಾಸಕರಿಗೆ ಝಿರೋ ಟ್ರಾಫಿಕ್ ನೀಡುವ ಅವಕಾಶವಿಲ್ಲ. ಇದಕ್ಕೆ ಸಾರ್ವಜನಿಕ ವಲಯದಜಲ್ಲಿ ಆಕ್ರೋಶ ವ್ಯಕ್ತವಾಯಿತು. ಇದಲ್ಲದೆ ಪೂರ್ವ ನಿಗದಿತವಾಗಿ ಒಂದು ಭಾರಿ 5 ಸಚಿವರಿಗೆ ಪ್ರಮಾನನವಚನ ಬೋಧಿಸುವ ಬದಲು ಶಾಸಕಿ ಜೊಲ್ಲೆ ತಡವಾಗಿ ಆಗಮನದ ಹಿನ್ನೆಲೆ ಒಬ್ಬೊಬ್ಬರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕೈತಪ್ಪಿದ ಸಚಿವ ಸ್ಥಾನ; ಕಾರ್ಯಕ್ರಮಕ್ಕೆ ಗೈರು
ವಲಸೆ ಶಾಸಕರಾದ ಶ್ರೀಮಂತ್ ಪಾಟೀಲ್, ಆರ್ ಶಂಕರ್ ಹಾಗೂ ಮಹೇಶ್ ಕುಮ್ಮಟಹಳ್ಳಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಜೊತೆಗೆ ಶಾಸಕರಾದ ಬಸವರಾಜ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಸಿ.ಪಿ ಯೋಗೇಶ್ವರ್, ಹೆಚ್.ವಿಶ್ವನಾಥ್ ರಾಜಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಇದನ್ನೂ ಓದಿ: ಸಿಗದ ಸಚಿವ ಸ್ಥಾನ: ಬೆಲ್ಲದ್ ಬೆಂಬಲಿಗರಿಂದ ಶೆಟ್ಟರ್, ಬಿಎಸ್ವೈಗೆ ಧಿಕ್ಕಾರ, ಪ್ರತಿಭಟನೆ