ಬೆಂಗಳೂರು: ನಾಳೆ 10 ಗಂಟೆಗೆ ಟ್ರೇಡ್ ಯುನಿಯನ್ ನಾಯಕರನ್ನ ಕರೆದು ಸಭೆ ನಡೆಸುತ್ತೇವೆ. ಮುಖಂಡರ ಜೊತೆ ಸಭೆ ಮಾಡಿ ಅವರ ಬೇಡಿಕೆಗಳನ್ನ ಈಡೇರಿಸುವ ಕೆಲಸ ಮಾಡುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.
ಸಿಎಂ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ವಿಕಾಸಸೌಧದಲ್ಲಿ ಸಭೆ ಮಾಡುತ್ತೇವೆ, ಕೋಡಿಹಳ್ಳಿ ಚಂದ್ರಶೇಖರ್ ನಮ್ಮ ಟ್ರೇಡ್ ಯುನಿಯನ್ ನಾಯಕರಲ್ಲ, ಮನವಿ ಕೊಟ್ಟ ಕಾರಣಕ್ಕೆ ಎಲ್ಲರನ್ನು ಕರೆಯಲು ಸಾಧ್ಯವಿಲ್ಲ. ನೋಂದಾಯಿತ ಟ್ರೇಡ್ ಯುನಿಯನ್ ನಾಯಕರನ್ನು ಮಾತ್ರ ಸಭೆಗೆ ಕರೆಯುತ್ತೇವೆ. ನಾಳೆ ಬೇರೆ ಸಮುದಾಯದವರು ಬರುತ್ತೇವೆ ಅಂತಾರೆ. ಅವರನ್ನೆಲ್ಲ ಸಭೆಗೆ ಕರೆಯಲು ಆಗುತ್ತದಾ? ಕೋಡಿಹಳ್ಳಿ ಚಂದ್ರಶೇಖರ ರೈತ ನಾಯಕರು. ಹಾಗಾಗಿ ಅವರನ್ನು ಆಹ್ವಾನಿಸಲ್ಲ ಎಂದು ಇದೇ ವೇಳೆ ಡಿಸಿಎಂ ಸ್ಪಷ್ಟಪಡಿಸಿದರು.
ಖಾಸಗಿ ವಾಹನಗಳನ್ನ ಬಳಸಿಕೊಂಡ ಪ್ರಯಾಣಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳವ ಬಗ್ಗೆಯೂ ಕ್ರಮ ಕೈಗೊಂಡಿದ್ದೇವೆ. ಸಾರಿಗೆ ನೌಕರರ ಯಾವುದೇ ಬೇಡಿಕೆ ಇದ್ದರೂ ಅದನ್ನ ಬಗೆಹರಿಸುವ ಕೆಲಸ ಮಾಡುತ್ತೇವೆ. ಸರ್ಕಾರಿ ನೌಕರರನ್ನಾಗಿ ಮಾಡುವ ಬೇಡಿಕೆ ಸದ್ಯಕ್ಕೆ ಸಾಧ್ಯವಿಲ್ಲ. ಸರ್ಕಾರಿ ನೌಕರರಿಗಿಂತ ಉತ್ತಮ ಸೌಲಭ್ಯ ನೀಡುತ್ತೇವೆ ಎಂದರು.
ಕೆಎಸ್ಆರ್ಟಿಸಿ, ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ.ಎಸ್.ವೀರಯ್ಯ ಮಾತನಾಡಿ, ನಿಗಮದಲ್ಲಿ 35 ಸಾವಿರ ಎಸ್ಸಿ, ಎಸ್ಟಿ ನೌಕರರಿದ್ದಾರೆ. ಸಿಎಂಗೆ ಸಾರಿಗೆ ನೌಕರರ ಬಗ್ಗೆ ಸಹಾನುಭೂತಿ ಇದೆ. ನಾಳೆ ಒಂದು ಸಭೆ ಕರೆದಿದ್ದಾರೆ. ಪಾಲಿಸಿ ಬಗ್ಗೆ ಸಭೆ ಮಾಡಲಿದ್ದಾರೆ. ಕೊರೊನಾ ಸಮಯದಲ್ಲಿ ಮೃತ ಸಿಬ್ಬಂದಿಗೆ 30 ಲಕ್ಷ ನೀಡಲು ಸೂಚಿಸಿದ್ದಾರೆ. ನಾನು ಎಸ್ಸಿ, ಎಸ್ಟಿ ನೌಕರರ ಹಿತ ಕಾಪಾಡುವ ಕೆಲಸ ಮಾಡುತ್ತೇನೆ. ನೌಕರರು ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ಬರಬೇಕು ಎಂದು ಮನವಿ ಮಾಡುತ್ತೇನೆ ಎಂದರು.