ಕರ್ನಾಟಕ

karnataka

ETV Bharat / city

ಸಚಿವರು, ಸಂಸದರ ಹೊಸ ವಾಹನ ಖರೀದಿ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ - ಆರ್ಥಿಕ ಮಿತಿ ಪರಿಷ್ಕರಣೆ

ಹೊಸ ಸರ್ಕಾರಿ ವಾಹನ ಖರೀದಿಗೆ ಆರ್ಥಿಕ ಮಿತಿ ಹೆಚ್ಚಿಸಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Karnataka govt hikes new vehicle price limit
ಸಾಂದರ್ಭಿಕ ಚಿತ್ರ

By

Published : Aug 20, 2022, 7:19 AM IST

ಬೆಂಗಳೂರು: ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ, ವೈದ್ಯಕೀಯ ಪರಿಹಾರ ಭತ್ಯೆ ವಿಸ್ತರಣೆ, ಗುತ್ತಿಗೆದಾರ ನೌಕರರ ವೇತನ ಹೆಚ್ಚಿಸುವ ಬೇಡಿಕೆ ಈಡೇರಿಸಲು ಮೀನಮೇಷ ಎಣಿಸುವ ರಾಜ್ಯ ಸರ್ಕಾರ ಸಚಿವರು ಹಾಗೂ ಸಂಸದರ ಹೊಸ ವಾಹನ ಖರೀದಿಗೆ ಆರ್ಥಿಕ ಮಿತಿ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಚಿವರು, ಸಂಸದರು, ಎಸಿಎಸ್, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳು, ಇಲಾಖಾ ಮುಖ್ಯಸ್ಥರು, ಡಿಸಿಗಳು, ಎಸ್​​ಪಿಗಳು, ಜಿ.ಪಂ. ಸಿಇಒಗಳು, ಜಿಲ್ಲಾ ನ್ಯಾಯಾಧೀಶರು, ಎಸಿಗಳು, ಡಿವೈಎಸ್​ಪಿಗಳು, ತಹಶೀಲ್ದಾರ್​ಗಳು, ತಾಲೂಕು ಮಟ್ಟದ ಅಧಿಕಾರಿಗಳಿಗೆ ಹೊಸ ಸರ್ಕಾರಿ ವಾಹನ ಖರೀದಿಗೆ ಆರ್ಥಿಕ ಮಿತಿ ಪರಿಷ್ಕರಣೆ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸಿದೆ. ಸಚಿವರು ಮತ್ತು ಸಂಸದರ ಉಪಯೋಗಕ್ಕಾಗಿ ವಾಹನ ಖರೀದಿಸಲು ನಿಗದಿ ಪಡಿಸಿದ ಆರ್ಥಿಕ ಮಿತಿಯನ್ನು 23 ಲಕ್ಷ ರೂ.ನಿಂದ 26 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಹೊಸ ವಾಹನ ಖರೀದಿಸುವ ವೇಳೆಯಲ್ಲಿ ಇಂಧನ ಮಿತವ್ಯಯ ಮತ್ತು ನಿರ್ವಹಣಾ ವೆಚ್ಚ ಕಡಿಮೆ ಹೊಂದಿರುವ ವಾಹನಗಳನ್ನು ಖರೀದಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಸೇರಿದಂತೆ ಇತರ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಆರ್ಥಿಕ ಮಿತವ್ಯಯ, ಆರ್ಥಿಕ ಹೊರೆ ನೆಪವೊಡ್ಡಿ ಕೊಕ್ಕೆ ಹಾಕುವ ಐಎಎಸ್ ಅಧಿಕಾರಿಗಳು ಇದೀಗ ಹೊಸ ವಾಹನ ಖರೀದಿಗಿದ್ದ ಆರ್ಥಿಕ ಮಿತಿಯನ್ನು ಹೆಚ್ಚಿಸಿಕೊಂಡಿದ್ದಾರೆ.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರುಗಳಿಗೆ ಹೊಸ ವಾಹನ ಖರೀದಿಸಲು ಈ ಹಿಂದೆ ನಿಗದಿಪಡಿಸಿದ್ದ ಆರ್ಥಿಕ ಮಿತಿಯನ್ನು ಸಡಿಲಗೊಳಿಸಿದೆ. ಈ ಸಂಬಂಧ 2022ರ ಆ.18ರಂದು ಆದೇಶ ಹೊರಡಿಸಲಾಗಿದೆ.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರುಗಳು (ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳಾಗಿದ್ದಲ್ಲಿ) ವಾಹನ ಖರೀದಿಸಲು ಈ ಹಿಂದೆ ನಿಗದಿಪಡಿಸಿದ್ದ ಆರ್ಥಿಕ ಮಿತಿಯನ್ನು 14 ಲಕ್ಷ ರೂ. ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಅದೇ ರೀತಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರುಗಳಿಗೆ 9.00 ಲಕ್ಷ ರೂ.ಗಳಿಂದ 18 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ ಜಿಲ್ಲಾ ಹಂತದ ಇತರ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಡಿವೈಎಸ್​ಪಿಗಳಿಗೆ 6.50 ಲಕ್ಷ ರೂ. ಗಳಿಂದ 12.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ತಹಶೀಲ್ದಾರ್ ಮತ್ತು ತಾಲೂಕು ಮಟ್ಟದ ಇತರ ಅಧಿಕಾರಿಗಳೀಗೆ 9.00 ಲಕ್ಷ ರೂ.ಗಳ ಮಿತಿಯಲ್ಲಿಯೇ ಹೊಸ ವಾಹನ ಖರೀದಿಸಲು ಆರ್ಥಿಕ ಮಿತಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ:ಚಿಕ್ಕಪೇಟೆ ಸರಕಾರಿ ಕನ್ನಡ ಶಾಲೆಯ ಜಾಗ ಮಾರಾಟ ಕ್ರಮ ಅಕ್ಷಮ್ಯ: ಮಹೇಶ ಜೋಶಿ

ABOUT THE AUTHOR

...view details