ಕರ್ನಾಟಕ

karnataka

ETV Bharat / city

ಮಾಲಿನ್ಯ ತಡೆ ಮಾರ್ಗಸೂಚಿ ಪಾಲಿಸದ ಕೈಗಾರಿಕೆಗಳ ವಿರುದ್ಧ ಕ್ರಮ: ಸಚಿವ ಸಿ.ಪಿ.ಯೋಗೇಶ್ವರ್​​

ಕೈಗಾರಿಕೆಗಳ ಸಮ್ಮತಿ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದ್ದು, ಶುಲ್ಕ ಪಾವತಿಗೆ ಮೂರು ತಿಂಗಳ ಸಮಯವನ್ನು ವಿಸ್ತರಿಸಲಾಗಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್​​ ತಿಳಿಸಿದ್ದಾರೆ.

minister yogeshwar meeting with officials in vidhanasoudha
ಮಾಲಿನ್ಯ ತಡೆ ಮಾರ್ಗಸೂಚಿ ಪಾಲಿಸದ ಕೈಗಾರಿಕೆಗಳ ವಿರುದ್ಧ ಕ್ರಮ: ಸಚಿವ ಸಿ.ಪಿ.ಯೋಗೇಶ್ವರ್​​

By

Published : Jul 2, 2021, 1:38 AM IST

ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ರಾಜ್ಯದೆಲ್ಲೆಡೆಯಲ್ಲಿರುವ ವಿವಿಧ ರೀತಿಯ ಕೈಗಾರಿಕೆಗಳು ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡದೇ ನದಿ-ಕೆರೆ ಸೇರಿದಂತೆ ಜಲ ಮೂಲಗಳಿಗೆ ನೇರವಾಗಿ ಹಾಕುತ್ತಿರುವುದು ಹಾಗೂ ಖಾಲಿ ಜಮೀನುಗಳಿಗೆ ತುಂಬುತ್ತಿರುವುದರ ಬಗ್ಗೆ ಅನೇಕ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತಾವೇ ಖುದ್ದಾಗಿ ಮುಂದಿನ ವಾರದಿಂದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡುವುದಾಗಿ ಸಚಿವ ಯೋಗೇಶ್ವರ್​ ಹೇಳಿದರು.

ಯಾವುದೇ ರೀತಿಯ ಕೈಗಾರಿಕೆಗಳು ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ಮೇಲೂ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯಲ್ಲಿ ಮರಳು, ಕಲ್ಲು ಸಾಗಿಸಲು ಪರ್ಮಿಟ್‍ ನೀಡುತ್ತಿದ್ದು, ಅದೇ ರೀತಿಯಲ್ಲಿ ಪರಿಸರ ಇಲಾಖೆಯಲ್ಲೂ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಿಖರವಾದ ತೂಕ ಮಾಡಿ ಪರ್ಮಿಟ್‍ ನೀಡುವ ವ್ಯವಸ್ಥೆ ಜಾರಿಗೆ ತರುವುದಾಗಿ ಸಚಿವರು ತಿಳಿಸಿದರು.

ಪರಿಸರ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆ ಯಾವುದೇ ಮುಲಾಜಿಲ್ಲದೇ ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ತಾವು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ನೀಡುವುದಾಗಿ ಎಚ್ಚರಿಕೆ ನೀಡಿದರು.

ಕೆ.ಸಿ.ವ್ಯಾಲಿ ಯೋಜನೆಯಡಿ ಮೂರನೇ ಹಂತದ ಸಂಸ್ಕರಣೆ ಮಾಡಿದ ನಂತರ ಕೆರೆಗಳಿಗೆ ನೀರು ತುಂಬಿಸಬೇಕು. ಕೋಲಾರ ಜಿಲ್ಲೆಯ 129 ಕೆರೆಗಳನ್ನು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, 84 ಕೆರೆಗಳನ್ನು ತುಂಬಿಸಲಾಗಿದೆ. ಆದರೆ ಮೊದಲ ಹಾಗೂ ಎರಡನೇ ಹಂತದಲ್ಲಿ ತ್ಯಾಜ್ಯ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡದೇ ಕೆರೆಗಳನ್ನು ತುಂಬಿಸಿರುವುದರಿಂದ ಆ ಭಾಗದ ಅಂತರ್ಜಲ ವಿಷವಾಗಿ ಮಾರ್ಪಾಡಾಗಿದೆ.

ಹೀಗಾಗಿ ಇನ್ನುಮುಂದೆ ವೈಜ್ಞಾನಿಕವಾಗಿ ಮೂರನೇ ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಿದ ನಂತರವೇ ಕೆರೆಗಳಿಗೆ ನೀರು ತುಂಬಿಸಬೇಕು. ತಪ್ಪಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು. ಇಸ್ರೇಲ್‍ ತಂತ್ರಜ್ಞಾನ ಬಳಸಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಿದರೇ ನೀರಿನ ಗುಣಮಟ್ಟ ಉತ್ತಮವಾಗಲಿದ್ದು, ಕೃಷಿಗೆ ಬಳಸಬಹುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರಾಜ್ಯದ 17 ನದಿಗಳ ಪುನಶ್ಚೇತನಕ್ಕೆ ಮಹತ್ವದ ಸಭೆ

ನಗರ-ಪಟ್ಟಣ ಹಾಗೂ ಹಳ್ಳಿಗಳ ಜನವಸತಿ ಪ್ರದೇಶದಿಂದ ಹಾಗೂ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡದೇ ನದಿಗಳಿಗೆ ನೀರು ಬಿಡಲಾಗಿದ್ದು, ಎಲ್ಲಾ ನದಿಗಳು ಕಲುಷಿತಗೊಂಡು ನೀರು ಬಳಸಲು ಯೋಗ್ಯವಲ್ಲದ ಪರಿಸ್ಥಿತಿಯಲ್ಲಿದೆ.

ಇದನ್ನೂ ಓದಿ:ಕೋಟ್ಯಂತರ ರೂಪಾಯಿ ವಸೂಲಿ ಆರೋಪ: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಅರೆಸ್ಟ್‌

ಹೀಗಾಗಿ ನಗರಾಭಿವೃದ್ಧಿ ಇಲಾಖೆಯೊಂದಿಗೆ ಸಭೆ ನಡೆಸಿ ಜನವಸತಿ ಪ್ರದೇಶ ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಣೆ ಮಾಡಿದ ನಂತರ ಉದ್ಯಾನವನ ಹಾಗೂ ಇತರೆ ಸೌಲಭ್ಯಗಳಿಗೆ ನೀರನ್ನು ಬಳಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂದರು. ಮೈಸೂರಿನ ಲಕ್ಷ್ಮಣತೀರ್ಥ ನದಿ ಮೀತಿ-ಮೀರಿ ಕಲುಷಿತಗೊಂಡಿದ್ದು, ಬಳಕೆಗೆ ಯೋಗ್ಯವಿಲ್ಲದಂತೆ ಆಗಿದೆ. ಇದೇ ರೀತಿಯಲ್ಲಿ ರಾಜ್ಯದ ಎಲ್ಲಾ ನದಿಗಳು ಸಹ ಕಲುಷಿತಗೊಂಡಿವೆ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಗ್ಗೆ ನಿರ್ಧಾರ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿನದಲ್ಲಿರುವ 9 ಲ್ಯಾಬೋರೇಟರಿಗಳನ್ನು ಮೇಲ್ದರ್ಜೆಗೆರಿಸಲು ನಿರ್ಧಾರ ಕೈಗೊಳ್ಳಲಾಯಿತು. ಬೆಂಗಳೂರು-ಮೈಸೂರು-ಹಾಸನ-ಮಂಗಳೂರು-ಬೆಳಗಾವಿ-ಧಾರವಾಡ-ಕಲಬುರಗಿ-ರಾಯಚೂರು ಹಾಗೂ ದಾವಣಗೆರೆಯಲ್ಲಿ ಎಲ್ಲಾ ಲ್ಯಾಬೋರೇಟರಿಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನ ಕೈಗೊಳ್ಳಲಾಯಿತು. ಖಾಲಿ ಇರುವ 174 ಹುದ್ದೆಗಳನ್ನು ಮೊದಲ ಹಂತದಲ್ಲಿ ಭರ್ತಿ ಮಾಡಲು ನಿರ್ಧರಿಸಲಾಯಿತು. ಉಳಿದ 150ಕ್ಕೂ ಹೆಚ್ಚಿನ ಹುದ್ದೆಗಳನ್ನು ಎರಡನೇ ಹಂತದಲ್ಲಿ ಭರ್ತಿ ಮಾಡುವುದಾಗಿ ತಿಳಿಸಿದರು.

ಕೈಗಾರಿಕೆಗಳ ಸಮ್ಮತಿ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದ್ದು, ಶುಲ್ಕ ಪಾವತಿಗೆ ಮೂರು ತಿಂಗಳ ಸಮಯವನ್ನು ವಿಸ್ತರಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು. ಸೂರ್ಯ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಛೇರಿಯನ್ನು ಅತೀ ಶೀಘ್ರದಲ್ಲಿ ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದರು.

ವಿಧಾನಸೌಧದ ಸಚಿವರ ಕಚೇರಿಯಲ್ಲಿ ಪರಿಸರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಯಿತು. ಸಚಿವ ಯೋಗೇಶ್ವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬ್ರೀಜೇಶ್‍ ಕುಮಾರ್​, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದರು.

ABOUT THE AUTHOR

...view details