ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯ ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಆಕೆಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಅದರೊಂದಿಗೆ ಆಕೆಯ ಕುಟುಂಬ ಕಷ್ಟದಲ್ಲಿದ್ದು, ಆಕೆಗೆ ಚಿಕಿತ್ಸೆ ಕೊಡಿಸುವ ಹಂತದಲ್ಲಿ ಅವರು ಇಲ್ಲದ ಕಾರಣ ಆಕೆಗೆ ವೈಯಕ್ತಿಕವಾಗಿ ನಾನು 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ ಎಂದು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಚೇತರಿಕೆಗೆ ಸಮಯ ಬೇಕು:ಆ್ಯಸಿಡ್ ದಾಳಿಗೊಳಗಾದ ಯುವತಿ ದೇಹ ಶೇ.35 ರಿಂದ 40ರಷ್ಟು ಸುಟ್ಟು ಹೋಗಿದೆ. ಪರಿಸ್ಥಿತಿ ಸ್ವಲ್ಪ ಕ್ಲಿಷ್ಟಕರವಾಗಿದೆ. ಆದರೂ ವೈದ್ಯರು ಆಕೆ ಚೇತರಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಒಂದು ವಾರದ ನಂತರ ಅವರಲ್ಲಿ ಆಗುವ ಚೇತರಿಕೆಯ ಬಗ್ಗೆ ಗೊತ್ತಾಗುತ್ತದೆ. ಪೂರ್ಣ ಪ್ರಮಾಣದ ಚೇತರಿಕೆ ಕಾಣಲು ಎರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಯುವತಿ ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ನಾನು ಸೇರಿದಂತೆ ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದು ಹೇಳಿದರು.