ಬೆಂಗಳೂರು:ಕೇಂದ್ರ ಸರ್ಕಾರ 2030ಕ್ಕೆ ಮಲೇರಿಯಾ ಮುಕ್ತ ಭಾರತಕ್ಕೆ ಶ್ರಮಿಸುತ್ತಿದೆ. ರಾಜ್ಯದಲ್ಲೂ ಸರ್ಕಾರ ಮಲೇರಿಯಾ ವಿರುದ್ಧ ಹೋರಾಟ ಮಾಡುತ್ತಿದೆ. 2027ರ ಹೊತ್ತಿಗೆ ರಾಜ್ಯದಲ್ಲಿ ಮಲೇರಿಯಾ ನಿರ್ಮೂಲನೆ ಆಗಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕರೆ ಕೊಟ್ಟರು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಪಿಎಂಎಸ್ ಎಸ್ವೈ ಆಸ್ಪತ್ರೆ ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಲೇರಿಯಾ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಜೊತೆಯಾಗಿ ಶ್ರಮ ಪಟ್ಟರೆ ಆರೋಗ್ಯಯುಕ್ತ ಕರ್ನಾಟಕದ ಕನಸು ನನಸಾಗಬಹುದು ಎಂದು ಹೇಳಿದರು.
ಮಲೇರಿಯಾ ನಿಯಂತ್ರಿಸುವುದು ಹೇಗೆ?:ಮಲೇರಿಯಾ ಅನಾಫಿಲಿಸ್ ಹೆಣ್ಣು ಸೊಳ್ಳೆಯ ಕಡಿತದಿಂದ ಬರುತ್ತದೆ. ಹೀಗಾಗಿ ಸೊಳ್ಳೆ ಬಾರದೇ ಇರುವ ಹಾಗೆ ಅಥವಾ ಅದರ ಸಂತತಿ ಬೆಳೆಯದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ಪರದೆ ಹಾಕಿಸಿಕೊಳ್ಳಬೇಕು. ರಾಜ್ಯದ 10 ಜಿಲ್ಲೆಗಳಲ್ಲಿ ಕಳೆದ 3 ವರ್ಷಗಳಿಂದ ಒಂದೇ ಒಂದು ಮಲೇರಿಯಾ ಪ್ರಕರಣ ಕಂಡು ಬಂದಿಲ್ಲ. ಉಡುಪಿ, ಮಂಗಳೂರು ಪ್ರದೇಶಗಳಲ್ಲಿ ಮಲೇರಿಯಾ ಹೆಚ್ಚಿದೆ. ಈ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದು ತಿಳಿಸಿದರು.