ಕರ್ನಾಟಕ

karnataka

ETV Bharat / city

2021ರ ಆರಂಭದಲ್ಲಿ ಕೋವಿಡ್ ಲಸಿಕೆ ಬರುವ ನಿರೀಕ್ಷೆ ಇದೆ: ಸಚಿವ ಸುಧಾಕರ್

ಯಾವುದೇ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಕನಿಷ್ಠ 5-6 ವರ್ಷ ಬೇಕಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಏಳೆಂಟು ತಿಂಗಳಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

By

Published : Oct 27, 2020, 3:41 PM IST

Minister Sudhakar talk about covid vaccine issue
2021ರ ಆರಂಭದಲ್ಲಿ ಕೋವಿಡ್ ಲಸಿಕೆ ಬರುವ ನಿರೀಕ್ಷೆ ಇದೆ: ಸಚಿವ ಸುಧಾಕರ್

ಬೆಂಗಳೂರು: 2021 ಆರಂಭದಲ್ಲಿ ಕೋವಿಡ್-19 ಲಸಿಕೆ ಬರುವ ನಿರೀಕ್ಷೆ ಇದ್ದು, ಲಸಿಕೆ ಹಂಚಿಕೆಗೆ ಬೇಕಾಗಿರುವ ಎಲ್ಲಾ ತಯಾರಿಗಳನ್ನು ‌ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ಆಸ್ಟ್ರಾಜನಿಕ್ ಫಾರ್ಮಸಿಟಿಕಲ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಕೋವಿಡ್ ಲಸಿಕೆ ಪ್ರಗತಿ, ಉತ್ಪಾದನೆ ಬಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತ‌ನಾಡಿದರು.

ಲಸಿಕೆ ತರಲು ಎಲ್ಲಾ ದೇಶಗಳು ಪ್ರಯತ್ನ ನಡೆಸುತ್ತಿದ್ದು, ಕೆಲವು ವಿಶ್ವ ವಿದ್ಯಾಲಯಗಳು ಸಂಶೋಧನೆ ಮಾಡುತ್ತಿವೆ. ಆಕ್ಸ್​​ಫರ್ಡ್ ವಿವಿ ಆಸ್ಟ್ರಾಜನಿಕ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸಂಶೋಧನೆ ಮಾಡುತ್ತಿದ್ದಾರೆ. ಆ ಸಂಸ್ಥೆಯ ಮುಖ್ಯಸ್ಥರು ಇಂದು ಆಗಮಿಸಿದ್ದು, ಅವರೊಂದಿಗೆ ನಮ್ಮ ತಜ್ಞರು ಚರ್ಚೆ ನಡೆಸಿದ್ದಾರೆ. ಅವರ ಜೊತೆಗಿನ ಸಮಾಲೋಚನೆ ತೃಪ್ತಿದಾಯಕವಾಗಿದೆ. ಆದಷ್ಟು ಬೇಗ ಈ ಲಸಿಕೆ ಬರುವ ವಿಶ್ವಾಸ ಇದೆ ಎಂದು ತಿಳಿಸಿದರು.

ಪುಣೆಯ ಸೀರಂ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೂಡ ಇವರಿಗೆ ಅನುಮತಿ ನೀಡಿದೆ. ಇವರು ನೂರು ಕೋಟಿ ಜನರಿಗೆ ಔಷಧ ನೀಡುವ ಭರವಸೆ ನೀಡಿದ್ದಾರೆ. ಅವರು ನೀಡಿರುವ ಪಿಪಿಟಿಯಲ್ಲಿ ಮೊದಲ ಹಂತದ ಚಿಕಿತ್ಸೆ ಯಶಸ್ವಿಯಾಗಿದೆ. ಭಾರತದಲ್ಲಿ 1,600 ಜನರಿಗೆ ಲಸಿಕೆ ನೀಡಿ ಪ್ರಯೋಗ ಮಾಡಲಾಗುತ್ತಿದೆ. 5 ವರ್ಷದವರಿಂದ ಹಿಡಿದು ವಯೋವೃದ್ಧರ ವರೆಗೂ ಎಲ್ಲಾ ವಯೋಮಾನದವರಿಗೆ ಲಸಿಕೆ ನೀಡುವ ಪ್ರಯೋಗ ಮಾಡಲಾಗುತ್ತಿದೆ. ಲಸಿಕೆ ಕೊಟ್ಟ 28 ದಿನದಲ್ಲಿ ಆ್ಯಂಟಿ ಬಾಡಿ ಇಮ್ಯುನಿಟಿ ಹೆಚ್ಚಾಗುವ ಸಾಧ್ಯತೆ ಇದೆ. ಎರಡು ಮತ್ತು ಮೂರನೇ ಹಂತದಲ್ಲಿ ಮತ್ತೊಂದು ರೀತಿ ಪ್ರಯೋಗ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಯಾವುದೇ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಕನಿಷ್ಠ 5-6 ವರ್ಷ ಬೇಕಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಏಳೆಂಟು ತಿಂಗಳಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಹೈದರಾಬಾದ್ ಸಂಸ್ಥೆಯೂ ಪ್ರಯೋಗ ಮಾಡುತ್ತಿದೆ ಅವರ ಜೊತೆಯೂ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಲಸಿಕೆಗೆ ದರ ನಿಗದಿ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಇಲ್ಲ. ಲಸಿಕೆ ಪ್ರಯೋಗದ ಹಂತದಲ್ಲಿದ್ದು, ಸಂಸ್ಥೆಯವರು ಇದರಲ್ಲಿ ಯಾವುದೇ ಲಾಭ ಪಡೆಯುವುದಿಲ್ಲ. ಲಸಿಕೆಗೆ ತಗಲುವ ವೆಚ್ಚವನ್ನು ಮಾತ್ರ ಪಡೆಯುವುದಾಗಿ ಹೇಳಿದ್ದಾರೆ. ಲಸಿಕೆ ಯಾವಾಗ ಬರುತ್ತದೆ ಎನ್ನುವ ಬಗ್ಗೆ ಸ್ಪಷ್ಟವಾಗಿ ಹೇಳಲಾಗುವುದಿಲ್ಲ‌ ಎಂದರು.

ಲಸಿಕೆ ಹಂಚಿಕೆ ಸಂಬಂಧ ಉನ್ನತ ಮಟ್ಟದ ಸಮಿತಿ:

ರಾಜ್ಯದಲ್ಲಿ ಲಸಿಕೆಯನ್ನು ಯಾವ ರೀತಿ ವಿತರಿಸಬೇಕು ಎಂಬ ಬಗ್ಗೆ ಉನ್ನತ‌ ಮಟ್ಟದ ಪರಿಣಿತರ ಸಮಿತಿಯನ್ನು ರಚಿಸಲಿದ್ದೇವೆ ಎಂದು ಇದೇ ವೇಳೆ ತಿಳಿಸಿದರು. ಈ‌ ಸಮಿತಿಯಲ್ಲಿ ತಾಂತ್ರಿಕ ಸಮಿತಿ ಸದಸ್ಯರು, ತಜ್ಞರು, ಲಾಜಿಸ್ಟಿಕ್ ಸಂಸ್ಥೆಗಳು, ಭಾರತ ಸರ್ಕಾರದ ಪ್ರತಿನಿಧಿಗಳು ಇರಲಿದ್ದಾರೆ. ಅದರ‌ ಜೊತೆಗೆ ನಾಲ್ಕು ತಂಡಗಳನ್ನೂ ರಚಿಸಲಿದ್ದೇವೆ.‌ ರಾಜ್ಯದಲ್ಲಿ ಲಸಿಕೆಯನ್ನು ವಿತರಿಸುವ ಮಾರ್ಗೋಪಾಯಗಳ ಬಗ್ಗೆ ಸಮಾಲೋಚಿಸಿ ಶೀಘ್ರದಲ್ಲಿ ಒಂದು ತೀರ್ಮಾನಕ್ಕೆ ಬರಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಲಸಿಕೆಯನ್ನು ಮೊದಲು ಕೊರೊನಾ ವಾರಿಯರ್ಸ್​ಗೆ ನೀಡಲಾಗುತ್ತದೆ. ಯಾರಿಗೆ ಇಮ್ಯುನಿಟಿ ಕಡಿಮೆ ಇರುತ್ತದೋ ಅವರಿಗೆ ಮೊದಲು ನೀಡಲಾಗುತ್ತದೆ. ವಯೋವೃದ್ಧರಿಗೆ‌‌ ಮೊದಲು ಲಸಿಕೆ ನೀಡಲಾಗುತ್ತದೆ ಎಂದರು. ದರದ ಬಗ್ಗೆ ಯಾವುದೇ ತೀರ್ಮಾನ ಇಲ್ಲ. ಕೇಂದ್ರ ಸರ್ಕಾರದ ಜೊತೆ ಮಾತನಾಡಿ ದರ ನಿಗದಿಮಾಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ರಾಜ್ಯ ಸರ್ಕಾರ ಕೊರೊನಾ ಚಿಕಿತ್ಸೆಗೆ ಇದುವರೆಗೂ ಯಾವುದೇ ದರ ವಿಧಿಸಿಲ್ಲ. ಲಸಿಕೆ ಬಂದ ಮೇಲೆ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ ಕಡಿಮೆ ಆಗುತ್ತಿದೆ

ಇಡೀ ದೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ರಾಜ್ಯದಲ್ಲಿಯೂ ಕಡಿಮೆ ಆಗುತ್ತಿದೆ. ಮುಂದಿನ ಮೂರು ತಿಂಗಳು ಚಳಿಗಾಲದಲ್ಲಿ ಕೊರೊನಾ ಹೇಗೆ ವರ್ತಿಸುತ್ತಿದೆ ಎನ್ನುವುದು ಗೊತ್ತಿಲ್ಲ, ಹೀಗಾಗಿ ಜಾಗೃತಿ ಮುಖ್ಯ ಎಂದು ತಿಳಿಸಿದರು.

ಕೋವಿಡ್ ನಿಯಂತ್ರಣ ಸಂಬಂಧ ಆರಂಭದ ದಿನದಲ್ಲಿ ಸಿಎಂ ನನಗೆ ಜವಾಬ್ದಾರಿ ನೀಡಿದ್ದರು. ಆರಂಭದಿಂದಲೂ ಕೋವಿಡ್ ಅಂಕಿ ಬಗ್ಗೆ ನಾವು ಯಾವುದೇ ಮಾಹಿತಿ ಮುಚ್ಚಿಟ್ಟಿಲ್ಲ. ಸಾವಿನ ಸಂಖ್ಯೆ, ಗುಣಮುಖರ ಸಂಖ್ಯೆ, ಯಾವುದನ್ನು ಮುಚ್ಚಿಟ್ಟಿಲ್ಲ. ಕಳೆದ ಹತ್ತು ದಿನದಿಂದ ಪ್ರಕರಣ ಕಡಿಮೆ ಆಗುತ್ತಿದೆ ಎಂದರು.

ABOUT THE AUTHOR

...view details