ಬೆಂಗಳೂರು :ಸಚಿವ ಆರ್.ಅಶೋಕ್ಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದರಿಂದಾಗಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀವು ಕೂಡ ಆರ್.ಅಶೋಕ್ ಅವರ ಪ್ರಾಥಮಿಕ ಸಂಪರ್ಕಿತರ ಪಟ್ಟಿಗೆ ಬರುತ್ತೀರಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಸುಧಾಕರ್, ಅವರ ಸಂಪರ್ಕಕ್ಕೆ ಬಂದ ದಿನ ನಾನು ಮಾಸ್ಕ್ ಹಾಕಿದ್ದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ ದಿನ ಆರ್. ಅಶೋಕ್ ಅವರನ್ನು ಭೇಟಿಯಾಗಿದ್ದು, ನಾನು ಮಾಸ್ಕ್ ಹಾಕಿದ್ದೆ. ಅವರೂ ಮಾಸ್ಕ್ ಹಾಕಿದ್ದರು. ಎರಡು ದಿನದ ಹಿಂದೆ ನಾನು ಸಿಎಂ ಕೋವಿಡ್ ಟೆಸ್ಟ್ ಮಾಡಿಸಿದ್ದೀವಿ, ಆಗ ನೆಗೆಟಿವ್ ರಿಪೋರ್ಟ್ ಬಂದಿದೆ. ಬೇಕಾದರೆ ಸರ್ಟಿಫಿಕೇಟ್ ತೋರಿಸುತ್ತೇನೆ, ನೋಡಿಕೊಳ್ಳಿ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.
ಮೊದಲ ಹಾಗೂ ಎರಡನೇ ಅಲೆಯ ಸಂರ್ಭದಲ್ಲಿ ನಾನು ಈ ತನಕ 50ರಿಂದ 60 ಬಾರಿ ಕೋವಿಡ್ ಟೆಸ್ಟ್ ಮಾಡಿಸಿದ್ದೀನಿ. ಈವರೆಗೂ ಪಾಸಿಟಿವ್ ಬಂದಿಲ್ಲ. ರಾಜ್ಯದ ಜನರ ಆಶೀರ್ವಾದದಿಂದ ಪಾಸಿಟಿವ್ ಆಗಿಲ್ಲ ಎಂದು ಸುಧಾಕರ್ ತಿಳಿಸಿದರು.
ಐದಾರು ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ :ಹೊಸ ಪ್ರಬೇಧ ಒಮಿಕ್ರಾನ್ ವೇಗವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ಇದು ಸಂಪೂರ್ಣ ಲಾಕ್ಡೌನ್ ಅಲ್ಲ. ಜನರಲ್ಲಿ ಶಿಸ್ತು ಬರಲು ಕರ್ಫ್ಯೂ ಜಾರಿ ಮಾಡಲಾಗಿದೆ. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರೆ ಸೋಂಕು ನಿಯಂತ್ರಣ ಸಾಧ್ಯತೆ ಇದೆ.
ನಿನ್ನೆ ಬೆಂಗಳೂರಿನಲ್ಲಿ ಶೇ.7.8ರಷ್ಟು ಪಾಸಿಟಿವಿಟಿ ಆಗಿದೆ. ಐದಾರು ಜಿಲ್ಲೆಗಳಲ್ಲಿ ಕೇಸ್ಗಳ ಸಂಖ್ಯೆ ಜಾಸ್ತಿ ಆಗಿದೆ. ಮೊದಲನೇ, ಎರಡನೇ ಅಲೆಗಳಲ್ಲಿ ನಾವು ಬಹಳ ಅನುಭವಿಸಿದ್ದೇವೆ. ಎಲ್ಲ ತಿಳಿದೂ ಯಾವ ಕ್ರಮ ಕೂಡ ತೆಗೆದುಕೊಳ್ಳದೇ ಇರೋದು ಸರಿಯಲ್ಲ. ಹಾಗಾಗಿ, ಮೊದಲಿನಿಂದಲೇ ನಿಯಂತ್ರಣ ಮಾಡಬೇಕು ಎಂಬ ಕಾರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸುಧಾಕರ್ ಹೇಳಿದ್ದಾರೆ.