ಬೆಂಗಳೂರು: ಸ್ವಪಕ್ಷೀಯ ಶಾಸಕ ಪ್ರೀತಮ್ ಗೌಡ ಅವರಿಗೆ ಸೂಕ್ಷ್ಮ ಮಾತುಗಳಲ್ಲೇ ಸಚಿವ ಸೋಮಣ್ಣ ತಿರುಗೇಟು ನೀಡಿದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ, ಹಾಸನದಲ್ಲಿ ಚುನಾವಣೆ ಮಾಡಿದ್ದೆ. ಆಗ ಇವರೆಲ್ಲ ಎಲ್ಲಿದ್ದರೋ ಗೊತ್ತಿಲ್ಲ ಎಂದು ಕುಟುಕಿದರು.
ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದ ಸೋಮಣ್ಣ ವಿಧಾನಸೌಧದ ಕಚೇರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಪೂಜೆ ನೆರವೇರಿಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಈ ರಾಜ್ಯದ ಮುತ್ಸದ್ದಿ ನಾಯಕ. ದೇವೇಗೌಡರ ಹಿರಿತನಕ್ಕೆ ಗೌರವ ಕೊಡಬೇಕು ಎಂದರು.
ಸೋಮಣ್ಣನವರ ಒಳ್ಳೆಯತನ ಪ್ರೀತಮ್ ಗೌಡ ಅವರಿಗೆ ಖಾರವಾಗಿ ಕಾಣಿಸಿರಬಹುದು. ಅವರಿಗೆ ಒಳ್ಳೆಯದಾಗಲಿ. ಇನ್ಮುಂದೆ ನಾನು ಎಲ್ಲರಿಗೂ ಬಹುವಚನದಲ್ಲೇ ಮಾತನಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಶಾಸಕ ಪ್ರೀತಮ್ ಗೌಡ ಚಿಕ್ಕವರು, ಇತಿಮಿತಿಯಲ್ಲಿ ಇರಬೇಕು: ವಿ. ಸೋಮಣ್ಣ
ಆನಂದ್ ಸಿಂಗ್ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಆನಂದ್ ಸಿಂಗ್ ಅವರ ಅಸಮಾಧಾನ ಎರಡು ದಿನಗಳಲ್ಲಿ ಸುಖಾಂತ್ಯವಾಗಲಿದೆ. ಆನಂದ್ ಸಿಂಗ್ ಬುದ್ಧಿವಂತರಿದ್ದಾರೆ. ಈಗಾಗಲೇ ಸಿಎಂ ಮಾತನಾಡಿದ್ದಾರೆ. ಹೈಕಮಾಂಡ್ ಜೊತೆ ಚರ್ಚಿಸಿ ಸಿಎಂ ಬಸವರಾಜ ಬೊಮ್ಮಾಯಿ ಇನ್ನೊಮ್ಮೆ ಆನಂದ್ ಸಿಂಗ್ ಅವರ ಜೊತೆ ಮಾತನಾಡುತ್ತಾರೆ. ಮುಖ್ಯಮಂತ್ರಿಗಳು ಸೂಕ್ಷ್ಮವಾಗಿ ಹೆಜ್ಜೆ ಹಾಕುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಮಾರ್ಗದರ್ಶನವನ್ನೂ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ. ಆನಂದ್ ಸಿಂಗ್ ಅವರ ಅಸಮಾಧಾನ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.