ಬೆಂಗಳೂರು: ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಇಂದು ವಸತಿ ಸಚಿವ ವಿ. ಸೋಮಣ್ಣ ಅವರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ವಿಕಾಸಸೌಧದಲ್ಲಿ ಇಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಬಡವರಿಗೆ ನಾವು ಮನೆ ಕಟ್ಟಿ ಕೊಡುತ್ತಿದ್ದೇವೆ. ನೀವು ಸುಖಾಸುಮ್ಮನೆ ಕಡತಕ್ಕೆ ತಡೆ ಕೊಡಬಾರದು. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಆದರೂ ಫೈಲ್ ಮೂವ್ ಆಗುತ್ತಿಲ್ಲವೆಂದರೆ, ಕ್ಯಾಬಿನೆಟ್ಗಿಂತ ನೀವು ದೊಡ್ಡವ್ರೇನ್ರಿ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಡವರಿಗೆ ಮನೆ ಕಟ್ಟಿಸಿ ಕೊಡುವ ವಿಚಾರದಲ್ಲಿ ಸಮಸ್ಯೆ ಆಗಬಾರದು. ನಿಮ್ಮ ಕುಟುಂಬದಲ್ಲಿ ಯಾರು ಬಡವರು ಇಲ್ವವೇನ್ರೀ? ಸಮಸ್ಯೆಯಾದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ. ನಾನೇನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಹಣಕಾಸು ಸಮಸ್ಯೆ ಇದ್ದರೆ, ನಾನೇ ಮುಖ್ಯಮಂತ್ರಿಗಳನ್ನು ಭೇಟಿ ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಬಡವರಿಗೆ ಸಿಗಬೇಕಾದ ಮನೆಗಳು ತಡ ಆಗಬಾರದು. ನಾನು ಇಲ್ಲಿ ಕೆಲಸ ಮಾಡೋದಕ್ಕೆ ಬಂದಿದ್ದೇನೆ. ನನ್ನ ಗುರಿ ನಾನು ತಲುಪಬೇಕು ಅಷ್ಟೇ ಎಂದು ಮತ್ತೊಮ್ಮೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಟಳ್ಳಿ, ಶಾಸಕ ನಾಗೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.