ಬೆಂಗಳೂರು:ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಗುರುವಾರ ಕಾರ್ಮಿಕ ಕಲ್ಯಾಣ ಭವನದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಮಂಡಳಿಯ ನಿರ್ದೇಶಕರೊಂದಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸಭೆ ನಡೆಸಿದರು.
ಸಭೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಂಡಳಿಯ ವತಿಯಿಂದ ನೀಡಲಾಗುತ್ತಿರುವ ಧನ ಸಹಾಯದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವುದರ ಮೂಲಕವಾಗಿ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕರಿಗೆ ಭರ್ಜರಿ ಕೊಡುಗೆಯನ್ನು ಪ್ರಕಟಿಸಿದರು.
ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಹಾಗೂ ಐಐಟಿಗಳಲ್ಲಿ ವ್ಯಾಸಂಗ ಮಾಡುವ ಕಟ್ಟಡ ಕಾರ್ಮಿಕರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚದಲ್ಲಿ ಮಂಡಳಿ ಭರಿಸಲಿದೆ. ಪ್ಯಾರಾ ಮೆಡಿಕಲ್, ಬಿಎಡ್ ಕೋರ್ಸ್ ಗಳನ್ನು ಹೊಸದಾಗಿ ಸೇರಿಸಲಾಗಿದೆ, ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 30 ಸಾವಿರ ರೂಪಾಯಿ ಹಾಗೂ ಇತರೆ ವೃತ್ತಿಪರ ಕೋರ್ಸಗಗಳಿಗೆ ಸಹಾಯಧನವನ್ನು ನೀಡಲಾಗುವುದು ಎಂದು ಸಚಿವ ಹೆಬ್ಬಾರ್ ಹೇಳಿದರು.
ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯ ಧನವನ್ನು 10 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿಗಳಿಗೆ, ವಿವಾಹ ಸಹಾಯಧನವನ್ನು 50 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಎಲ್ಲಾ ನೂತನ ಪರಿಷ್ಕೃತ ಸಹಾಯ ಧನವನ್ನು ಗುರುವಾರದಿಂದಲೆ ಜಾರಿಗೊಳಿಸುವಂತೆ ಸಚಿವ ಹೆಬ್ಬಾರ್ ಅಧಿಕಾರಿಗಳಿಗೆ ಸೂಚಿಸಿದರು.