ಕರ್ನಾಟಕ

karnataka

ETV Bharat / city

ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳ ಆಸ್ತಿ ಸಮೀಕ್ಷೆಗೆ ಸಚಿವೆ ಜೊಲ್ಲೆ ಸೂಚನೆ - Sasikala Jolle latest news

ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸುವಂತೆ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಮೊದಲು ಕೋಟಾ ಶ್ರೀನಿವಾಸ್ ಪೂಜಾರಿ ಮುಜರಾಯಿ ಸಚಿವರಾಗಿದ್ದಾಗಲೂ ಆಸ್ತಿ ಸಮೀಕ್ಷೆ ನಡೆಸಲು ಸೂಚಿಸಿದ್ದರು.

meeting by Minister Sasikala Jolle
ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಸಭೆ

By

Published : Aug 18, 2021, 5:52 PM IST

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸುವಂತೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಸಭೆ

ವಿಕಾಸಸೌಧದ ಕಚೇರಿ ಪೂಜೆ ನೆರವೇರಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮುಜರಾಯಿ ಇಲಾಖೆಯ ಅಧಿಕಾರಿಗಳಿಂದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಎ, ಬಿ ಮತ್ತು ಸಿ ದರ್ಜೆಯ ಜಿಲ್ಲಾವಾರು ದೇವಸ್ಥಾನಗಳ ಮಾಹಿತಿ ಪಡೆದುಕೊಂಡರು. ದೇವಸ್ಥಾನಗಳಿಗೆ ಸಂಬಂಧಿಸಿದ ಆಸ್ತಿ ಎಷ್ಟಿದೆ ಎಂದು ಸಮೀಕ್ಷೆ ನಡೆಸಿ, ದೇವಸ್ಥಾನಗಳ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಮೀಕ್ಷೆ ನಡೆಸಲು ಮತ್ತೊಮ್ಮೆ ನಿರ್ದೇಶನ:

ಈ ಮೊದಲು ಕೋಟಾ ಶ್ರೀನಿವಾಸ್ ಪೂಜಾರಿ ಮುಜರಾಯಿ ಸಚಿವರಾಗಿದ್ದಾಗಲೂ ಆಸ್ತಿ ಸಮೀಕ್ಷೆ ನಡೆಸಲು ಸೂಚಿಸಿದ್ದರು. ಒತ್ತುವರಿಯಾಗಿರುವ ದೇವಾಲಯಗಳ ಭೂಮಿಯನ್ನು ವಶ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ನೂತನ ಸಚಿವೆ ಶಶಿಕಲಾ ಜೊಲ್ಲೆ ಮತ್ತೊಮ್ಮೆ ಸಮೀಕ್ಷೆ ನಡೆಸಲು ನಿರ್ದೇಶನ ನೀಡಿದ್ದಾರೆ.

ಯಾತ್ರಿ ನಿವಾಸ ನಿರ್ಮಾಣ ಸಂಬಂಧ ಮಾಹಿತಿ:

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಬಳಿ ಭಕ್ತರಿಗೆ ವಸತಿಗಾಗಿ ಎಷ್ಟು ಯಾತ್ರಿ ನಿವಾಸಗಳಿವೆ. ರಾಜ್ಯದಲ್ಲಿ ಯಾವ ದೇವಸ್ಥಾನದ ವ್ಯಾಪ್ತಿಯಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲು ಅವಕಾಶ ಇದೆ ಎನ್ನುವ ಬಗ್ಗೆ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದರು.

ತಿರುಪತಿ ಮಾದರಿ ಯಾತ್ರಿ ನಿವಾಸ:

ಅಲ್ಲದೇ ಮಹಾರಾಷ್ಟ್ರದ ಪಂಡರಪುರ ಹಾಗೂ ತುಳಜಾಭವಾನಿ ದೇವಸ್ಥಾನದ ಬಳಿ ತಿರುಪತಿ ಮಾದರಿ ಯಾತ್ರಿ ನಿವಾಸ ನಿರ್ಮಾಣ ಮಾಡುವ ನಿಟ್ಟಿನಲ್ಲಿ, ಅಲ್ಲಿ ರಾಜ್ಯ ಸರ್ಕಾರದ ಜಮೀನು ಎಷ್ಟಿದೆ ಎನ್ನುವ ಮಾಹಿತಿ ಪಡೆಯುವಂತೆ ಸೂಚಿಸಿದರು. ಆಂಧ್ರಪ್ರದೇಶದ ಶ್ರೀಶೈಲಂಗೆ ಭೇಟಿ ನೀಡಿ ಅಲ್ಲಿಯೂ ರಾಜ್ಯದ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡುವ ಕುರಿತು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದರು.

ತಮಿಳುನಾಡು, ಕೇರಳದಲ್ಲಿ ಯಾತ್ರಿ ನಿವಾಸ:

ತಮಿಳುನಾಡು, ಕೇರಳದ ಪ್ರಸಿದ್ಧ ದೇವಸ್ಥಾನಗಳಲ್ಲಿ ಯಾತ್ರಿ ನಿವಾಸಗಳನ್ನು ತೆರೆಯುವ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ಕೊರೊನಾ ಹಿನ್ನೆಲೆ, ದೇವಸ್ಥಾನಗಳಿಗೆ ಸಂಪೂರ್ಣ ನಿಷೇಧ ಹೇರುವ ಬದಲು ನಿರ್ದಿಷ್ಟ ಭಕ್ತರನ್ನು ಹಂತ ಹಂತವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ತಿಳಿದುಕೊಂಡು ಮಾಹಿತಿ ನೀಡುವಂತೆ ಸೂಚಿಸಿದರು.

ಇದನ್ನೂ ಓದಿ:ಅತಿವೃಷ್ಟಿಯಿಂದ ರಸ್ತೆ ಹಾನಿ : ತಕ್ಷಣದ ಕಾಮಗಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಸಿ ಸಿ ಪಾಟೀಲ್

ಇನ್ನು ರಾಜ್ಯ ಸರ್ಕಾರದ ಮಹತ್ವದ ಸಾಮೂಹಿಕ ಮದುವೆ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಯೋಜನೆ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಯೋಜನೆ ಯಶಸ್ವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ABOUT THE AUTHOR

...view details