ಬೆಂಗಳೂರು:ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಫುಲ್ ಆಕ್ಟೀವ್ ಆಗಿದ್ದು, ಮುಂಜಾನೆಯೇ ಕ್ಷೇತ್ರದ ಹಲವು ಕಡೆ ಭೇಟಿ ನೀಡಿ ಜನರ ಕುಂದು ಕೊರತೆ ಆಲಿಸಿದ್ದಾರೆ. ಪಕ್ಷದ ಪರ ಕೆಲಸ ಮಾಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಇಂದು ಕ್ಷೇತ್ರ ಸಂಚಾರ ಮಾಡಿ ಜನರ ಕುಂದು ಕೊರತೆ ಆಲಿಸಿದ್ರು.
ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ರೌಂಡ್ಸ್: ಜನರ ಕುಂದುಕೊರತೆ ಆಲಿಸಿದ ಕೇಂದ್ರ ಸಚಿವ
ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡರು ಇಂದು ಕ್ಷೇತ್ರಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದ್ರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 40ರ ದೊಡ್ಡಬಿದರಕಲ್ಲು ವ್ಯಾಪ್ತಿಯ ಬಿಬಿಎಂಪಿ ಪೌರ ಕಾರ್ಮಿಕರನ್ನು ಭೇಟಿ ಮಾಡಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಪೌರಕಾರ್ಮಿಕರು ಇಎಸ್ಐ ಸೌಲಭ್ಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ರು. ದೊಡ್ಡಬಿದರ ಕಲ್ಲು, ತಿಗಳರ ಪಾಳ್ಯ ಮೊದಲಾದೆಡೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಸ್ಥಳೀಯ ಸಮಸ್ಯೆಗಳು, ಅಗತ್ಯ ಸೌಕರ್ಯಗಳ ಕುರಿತು ಚರ್ಚೆ ನಡೆಸಿದರು.
ಚುನಾವಣೆ ವೇಳೆ ಪಕ್ಷದ ಪರವಾಗಿ ಕೆಲಸ ಮಾಡಿ ಅವಿರತ ಸೇವೆ ಸಲ್ಲಿಸಿದ ವೈದ್ಯರು, ಆರೋಗ್ಯ ಕ್ಷೇತ್ರದ ವೃತ್ತಿನಿರತರ ತಂಡವನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ವೈದ್ಯಕೀಯ ಕ್ಷೇತ್ರದ ತಂಡದಿಂದ ಕೇಂದ್ರ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಿದರು. ಚುನಾವಣಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.