ಬೆಂಗಳೂರು: ರೈತರ ಸಮಸ್ಯೆ ಪರಿಹಾರಕ್ಕೆ ನಾನು ಮತ್ತು ಕೃಷಿ ಸಚಿವರು ಒಟ್ಟಾಗಿ ಕೆಲಸ ಮಾಡುತ್ತೇವೆ. ರೈತರ ಪರವಾಗಿ ಕೆಲಸ ಮಾಡುವುದಕ್ಕೆ ನಾವು ಸಿದ್ಧ ಎಂದು ನೂತನ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್. ಶಂಕರ್ ಹೇಳಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿ ಇಂದು ಕಚೇರಿ ಪೂಜೆ ನೆರವೇರಿಸಿ, ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರು ಕೈಗೊಂಡಿರುವ ಹೋರಾಟವನ್ನು ಕೈಬಿಡಬೇಕು. ಹೋರಾಟಕ್ಕೆ ನಾವು ಬೆಂಬಲ ಕೊಡುವುದಿಲ್ಲ. ಯಾರದ್ದೋ ಮಾತು ಕೇಳಿ ಪ್ರತಿಭಟನೆ ಮಾಡೋದು ಸರಿಯಲ್ಲ. ರೈತರ ಪರ ಕೆಲಸ ಮಾಡೋಕೆ ನಮ್ಮ ಇಲಾಖೆ ಇದೆ ಎಂದರು.
ಬಿಜೆಪಿ ಸರ್ಕಾರದಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇಂದು ಸಭೆ ಮಾಡಿದ್ದೇನೆ. ತೋಟಗಾರಿಕೆ ಅವಲಂಬಿತ ರೈತರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ರೈತರು ಮತ್ತು ಸರ್ಕಾರದ ಮಧ್ಯೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಇಲಾಖೆ ಕೆಲಸ ಮಾಡುತ್ತದೆ. ಬೆಳೆಗಳ ಮಾರಾಟ, ಸಂಗ್ರಹಣೆ, ಸೇರಿದಂತೆ ಎಲ್ಲಾ ವಿಚಾರವಾಗಿ ಸಭೆ ಮಾಡಿದ್ದೇನೆ. ರೇಷ್ಮೆ ಇಲಾಖೆ ಅಧಿಕಾರಿಗಳ ಜೊತೆಯೂ ಸಭೆ ಮಾಡಿದ್ದೇನೆ. ರೇಷ್ಮೆ ಬೆಳೆಗಾರರ ಸಂಕಷ್ಟ, ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೃಷಿ ದೇವೋಭವ ಆಗುವಂತೆ ನಾವು ಕೆಲಸ ಮಾಡಬೇಕು ಎಂದು ಹೇಳಿದರು.
ರೈತರ ಜೀವದ ಜೊತೆ ಚೆಲ್ಲಾಟ ಆಡದೇ ರೈತರ ಪರ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಇಲಾಖೆಗೆ ಬೇಕಾದ ಯೋಜನೆಗೆ ಅನುದಾನ ಕೊಡುವಂತೆ ಸಿಎಂಗೆ ಮನವಿ ಮಾಡುತ್ತೇನೆ. ರೈತರ ಆದಾಯ ದ್ವಿಗುಣ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಕೇಂದ್ರದ ಜೊತೆಯೂ ಸಂಪರ್ಕದಲ್ಲಿದ್ದು, ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.