ಬೆಂಗಳೂರು :ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಾಕಷ್ಟು ಬಾರಿ ಹೇಳಿದ್ದಾರೆ. ಕೋವಿಡ್ ಅಲೆ ಕಡಿಮೆಯಾದ ನಂತರ ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಮತ್ತೆ ಹೇಳಿಕೆ ಕೊಡಲಿದ್ದು, ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಪಕ್ಷದ ಶಿಸ್ತು ಸಮಿತಿ ಕ್ರಮಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ.. ಓದಿ: ದೂರದೃಷ್ಟಿ ಯೋಜನೆಗಳನ್ನು ಜಾರಿಗೆ ತಂದ ಧೀಮಂತ ವ್ಯಕ್ತಿ ದೇವರಾಜ ಅರಸು ; ಸಿಎಂ ಬಿಎಸ್ವೈ
ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯ, ಇಡೀ ದೇಶ ಕೊರೊನಾ ಮಧ್ಯೆ ಸಿಲುಕಿರುವ ಸಂದರ್ಭದಲ್ಲಿ ನಾವೇ ನಾಯಕರು ನಾವೇ ಮುಖ್ಯಮಂತ್ರಿಗಳು ಎನ್ನುವ ಹೇಳಿಕೆ ಬಿಂಬಿತವಾಗಿರುವುದು ಮುಖ್ಯಮಂತ್ರಿಗಳ ಮನಸ್ಸಿಗೆ ನೋವಾಗಿದೆ. ಇಷ್ಟೆಲ್ಲಾ ಹಗಲು-ರಾತ್ರಿ ಕೆಲಸ ಮಾಡಿದರೂ ಈ ರೀತಿ ಹೇಳಿಕೆ ಬರುತ್ತಿರುವ ಬಗ್ಗೆ ಬೇಸರಗೊಂಡಿದ್ದಾರೆ ಎಂದರು.
ಪಕ್ಕದ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮನೆಯಿಂದ ಹೊರಗಡೆ ಬಂದಿಲ್ಲ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಹೊರಗಡೆ ಬರುವುದಿಲ್ಲ. ಆದರೆ, ನಮ್ಮ ಮುಖ್ಯಮಂತ್ರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡುವುದು, ಆರೈಕೆ ಕೇಂದ್ರಗಳಿಗೆ ಭೇಟಿ ನೀಡುವುದು, ಪ್ರತಿದಿನ ನಾಲ್ಕೈದು ಸಭೆ ನಡೆಸುವುದು, ಜನರ ಕಷ್ಟದಲ್ಲಿ ಭಾಗಿಯಾಗುವುದನ್ನು ಮಾಡುತ್ತಿದ್ದಾರೆ.
ಬೇರೆ ಯಾವುದೇ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆದರೆ ಸ್ವಂತ ಖರ್ಚಿನಲ್ಲಿ ಪಡೆಯಬೇಕು. ಆದರೆ, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ಹಣ ಪಾವತಿ ಮಾಡುವ ನಿರ್ಧಾರ ಮಾಡಿದ್ದಾರೆ. ಇಷ್ಟೆಲ್ಲ ಇದ್ದರೂ ಕೂಡ ಪದೇಪದೆ ನಾಯಕತ್ವದ ಪ್ರಶ್ನೆ ಅವರ ಮನಸ್ಸಿಗೆ ನೋವಾಗಿದೆ.
ಆ ದೃಷ್ಟಿಯಿಂದ ಇಂದು ಮುಖ್ಯಮಂತ್ರಿಗಳು ಇಂತಹ ಹೇಳಿಕೆ ನೀಡಿರಬಹುದು. ಆದರೆ, ಪ್ರಹ್ಲಾದ್ ಜೋಶಿ, ನಳಿನ್ ಕುಮಾರ್ ಕಟೀಲ್, ಸಿ ಟಿ ರವಿ ಇನ್ನೂ ಹಲವಾರು ನಾಯಕರು ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಯೋಗೇಶ್ವರ್ ಕೂಡ ಇಂದು ಯಡಿಯೂರಪ್ಪನವರೇ ನಮ್ಮ ನಾಯಕರು ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ ಎಂದು ಅವರು ಒಪ್ಪಿಕೊಂಡಿದ್ದಾರೆ. ಹಾಗಾಗಿ, ಇದಕ್ಕೆ ಅಂತ್ಯ ಹಾಡಬೇಕಿದೆ ಎಂದರು.
ನಮ್ಮೆಲ್ಲ ಸಚಿವ ಸಂಪುಟದ ಸಹೋದ್ಯೋಗಿಗಳು ಯಡಿಯೂರಪ್ಪನವರ ಜೊತೆ ಇದ್ದೇವೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಕೊರೊನಾದಂತಹ ಕಷ್ಟದ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಯಿಂದ ಜನರ ಭಾವನೆಗಳಿಗೆ ಘಾಸಿ ಮಾಡುವುದು ಸರ್ಕಾರದಲ್ಲಿ ಏನೋ ಆಗಿದೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.
ಇದಕ್ಕೆಲ್ಲಾ ಪೂರ್ಣವಿರಾಮ ಹಾಡಬೇಕಿದೆ. ಈ ರೀತಿಯ ಹೇಳಿಕೆಗಳಿಂದ ಮುಖ್ಯಮಂತ್ರಿಗಳ ಮನಸ್ಸಿಗೆ ನೋವಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಅವರು ನಮ್ಮೆಲ್ಲರ ನಾಯಕರು, ಕರ್ನಾಟಕದ ಮೂಲೆ ಮೂಲೆಯಲ್ಲಿ ಹಳ್ಳಿ-ಹಳ್ಳಿಯಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಕಟ್ಟಿದ್ದಾರೆ, ಯಡಿಯೂರಪ್ಪ ಹೋಗದ ಹಳ್ಳಿಯಿಲ್ಲ.
ಯಡಿಯೂರಪ್ಪ ನಾಯಕತ್ವ ನಮಗೆ ಇಂದು ಬೇಕು, ಮುಂದೆಯೂ ಬೇಕು. ಅವರ ನಾಯಕತ್ವದಲ್ಲಿ ನಾವು ಮುಂದುವರೆಯುತ್ತೇವೆ ಉಳಿದ ಅವಧಿಯನ್ನು ಯಡಿಯೂರಪ್ಪ ಪೂರ್ಣಗೊಳಿಸುತ್ತಾರೆ ಎನ್ನುವ ನಂಬಿಕೆಯಿದೆ, ಅಚಲವಾದ ವಿಶ್ವಾಸ ಇದೆ. ಕೇಂದ್ರದ ನಾಯಕರ ಆಶೀರ್ವಾದವೂ ಇದೆ. ಇನ್ಮುಂದೆ ಪಕ್ಷದ ವರ್ಚಸ್ಸು ಹೆಚ್ಚಿಸುವ, ಸರ್ಕಾರದ ವರ್ಚಸ್ಸು ಹೆಚ್ಚಿಸುವುದಷ್ಟೇ ನಮ್ಮ ಮುಂದಿರುವ ಗುರಿ ಎಂದರು.
ಅಚಲ ವಿಶ್ವಾಸ ನಂಬಿಕೆ ಹೈಕಮಾಂಡ್ ಮೇಲೆ ಯಡಿಯೂರಪ್ಪ ಅವರಿಗಿದೆ, ನಮಗೆ 104 ಸ್ಥಾನ ಬಂದು ಸರ್ಕಾರ ರಚನೆ ಮಾಡಲು ಸಾಧ್ಯವಾಗದ ಸ್ಥಿತಿ ಬಂದಾಗ ಇಡೀ ಹೈಕಮಾಂಡ್ ಯಡಿಯೂರಪ್ಪ ಬೆನ್ನಿಗೆ ನಿಂತಿತು, ನಂತರ 17-18 ಶಾಸಕರು ಯಡಿಯೂರಪ್ಪ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಬಂದಿದ್ದಾರೆ. ಯಡಿಯೂರಪ್ಪ ಆಲದಮರ ಎಂದು ಬಂದಿದ್ದಾರೆ, ನುಗ್ಗೆ ಮರ ಆಗಿದ್ದರೆ ಅವರ್ಯಾರು ಬರುತ್ತಿರಲಿಲ್ಲ ಎಂದರು.
ಪಕ್ಷ ಕಟ್ಟಿ ಬೆಳೆಸಿ, ಸರ್ಕಾರ ತಂದಾಗ ಕೆಲವರು ಅಲ್ಲಲ್ಲಿ ಮುಂದಿನ ನಾಯಕ ನಾನೇ, ಮುಂದಿನ ಮುಖ್ಯಮಂತ್ರಿ ನಾನೇ ಎಂದಾಗ ಸಹಜವಾಗಿ ಅವರ ಮನಸ್ಸಿಗೆ ನೋವಾಗಿದೆ. ಒಂದು ಗಂಟೆ ಚರ್ಚೆ ಮಾಡಿದ್ದೇವೆ, ಇನ್ಮುಂದೆ ಬರೀ ಕೆಲಸದತ್ತ ಗಮನ ಹರಿಸಲಿದ್ದಾರೆ ಇಲ್ಲಿಗೆ ಇದು ಮುಕ್ತಾಯವಾಗಲಿದೆ.
ನಮ್ಮದು ರಾಷ್ಟ್ರೀಯ ಪಕ್ಷ, ಪ್ರಜಾಪ್ರಭುತ್ವ ಇರುವ ಪಕ್ಷ, ಈಗಾಗಲೇ ಪಕ್ಷ ವಿರೋಧಿ ಹೇಳಿಕೆ ಕೊಡುವವರಿಗೆ ನೋಟಿಸ್ ಕೊಡಲಾಗುತ್ತಿದೆ. ಉತ್ತರ ಬಂದ ಮೇಲೆ ಪಕ್ಷದ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿದೆ ಎಂದರು. ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ವಿಷಯ ಕುರಿತು ಮಾತನಾಡಿದ ಅಶೋಕ್, ಹಿಂದೆ ಕಾಂಗ್ರೆಸ್-ಜೆಡಿಎಸ್ ಅಧಿಕಾರದಲ್ಲಿದ್ದಾಗ ಯಾವ ರೀತಿ ಐಎಎಸ್ ಅಧಿಕಾರಿಗಳ ಕಿತ್ತಾಟ ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ.
ಹೋಟೆಲ್‌ಗಳಲ್ಲಿ ಗಲಾಟೆ ಮಾಡಿದ್ದಾರೆ ಇದು ಆ ಮಟ್ಟಕ್ಕೆ ಹೋಗಿಲ್ಲ. ಆಡಳಿತಾತ್ಮಕವಾಗಿ ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದರು.