ಬೆಂಗಳೂರು: ಬಿಜೆಪಿಯ ಕೆಲ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಯಮ್ಮ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಆರ್. ಅಶೋಕ್ ನಮ್ಮೊಂದಿಗೂ ಕೆಲ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಓರ್ವ ಪಕ್ಷಾಂತರಿ. ಹೀಗಾಗಿ ಅವರು ಪಕ್ಷಾಂತರದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದ ಶಾಸಕರನ್ನು ಸೂರ್ಯ ಚಂದ್ರ ಇರುವವರೆಗೂ ಮತ್ತೆ ವಾಪಸ್ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಆದರೀಗ, ಅವರು ಬರುವುದಕ್ಕೆ ಅಡ್ಡಿಯಿಲ್ಲ ಎನ್ನುತ್ತಾರೆ. ಕಾಂಗ್ರೆಸ್ಗೆ ಗೆಲ್ಲುವ ಶಕ್ತಿ ಇಲ್ಲ. ಅದಕ್ಕಾಗಿ ಇಂತಹ ಮಾತುಗಳನ್ನಾಡುತ್ತಿದ್ದಾರೆ ಎಂದು ವ್ಯಂಗವಾಡಿದರು.
ಅಲ್ಲದೇ, ಕಾಂಗ್ರೆಸ್ನ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲೂ ಇದ್ದಾರೆ. ಅವರ ಬಳಿ ಒಂದು ಬಾರಿ ಹೋದರೆ ನಮ್ಮ ಬಳಿ ಹತ್ತು ಬಾರಿ ಬರುತ್ತಾರೆ. ಹಾಗೆಯೇ, ಸಿದ್ದರಾಮಯ್ಯ ಪಕ್ಷಕ್ಕೆ ಬರುವವರ ಹೆಸರು ಹೇಳಿದ ಮೇಲೆ ತಾವೂ ಹೆಸರು ಪ್ರಕಟಿಸುವುದಾಗಿ ಅಶೋಕ್ ತಿಳಿಸಿದರು. ಪಾದಯಾತ್ರೆ ನಿಂತು ಹೋಗಿದ್ದಕ್ಕೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಇವರಿಗೆ ನದಿಗಳು ನೆನಪಾಗುತ್ತವೆ ಎಂದು ಟೀಕಿಸಿದರು.