ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ವಾಕ್ಸಮರ ಮಂಡ್ಯದಲ್ಲಿ ನಿಲ್ಲದ ಯುದ್ಧವಾಗಿದೆ. ಒಂದು ರೀತಿಯ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದಂತಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮಾಜಿ ಪ್ರಧಾನಿ ದೇವೇಗೌಡರೇ ಈ ವಿಚಾರದಿಂದ ಹಿಂದೆ ಸರಿದಿದ್ದಾರೆ. ಇದು ಅವರಿಬ್ಬರ ನಡುವಿನ ವೈಯುಕ್ತಿಕ ಜಗಳ. ಹಾಗಾಗಿ, ನಾನು ಹೆಚ್ಚು ಹೇಳಲು ಬಯಸುವುದಿಲ್ಲ ಎಂದರು.
'ತನಿಖೆಗೆ ಸರ್ಕಾರ ಸಿದ್ದ'
ಕೆಆರ್‌ಎಸ್ ಡ್ಯಾಮ್ ಆಸುಪಾಸು ಕಂದಾಯ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ಕುರಿತು ದೂರು ಸಲ್ಲಿಸಿದರೆ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಹೇಳಿದ್ದಾರೆ. ಸಂಸದೆ ಸುಮಲತಾ ಅವರ ಬಳಿ ದಾಖಲೆಗಳಿದ್ದರೆ ದೂರು ಸಲ್ಲಿಸುವುದಕ್ಕೆ ಅಭ್ಯಂತರವಿಲ್ಲ. ಕಂದಾಯ ಇಲಾಖೆ ಕಚೇರಿ ತೆರೆದಿರುತ್ತದೆ, ಕಚೇರಿಗೆ ಬಂದು ದಾಖಲೆಗಳಸಹಿತ ಅವರು ದೂರು ಸಲ್ಲಿಸಬಹುದು ಎಂದರು.