ಕರ್ನಾಟಕ

karnataka

By

Published : May 19, 2022, 9:31 PM IST

ETV Bharat / city

ಬೆಳೆಹಾನಿಗೆ ತ್ವರಿತವಾಗಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಆರ್. ಅಶೋಕ್ ಸೂಚನೆ

ವಿಕಾಸಸೌಧದಲ್ಲಿ ಇಂದು ಮಳೆಯ ರೆಡ್ ಅಲರ್ಟ್ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಕಂದಾಯ ಸಚಿವ ಆರ್. ಅಶೋಕ್​ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಎಚ್ಚರಿಕೆ ವಹಿಸಲು, ಅಗತ್ಯ ಕ್ರಮಕ್ಕೆ ಸೂಚಿಸಿದರು.

minister-r-ashok
ಆರ್. ಅಶೋಕ್ ಸೂಚನೆ

ಬೆಂಗಳೂರು:ಭೂಕುಸಿತ, ನೆರೆ ಬಂದರೆ ಜಿಲ್ಲಾಧಿಕಾರಿಯೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ಮನೆಹಾನಿ, ಪ್ರಾಣಹಾನಿ ಉಂಟಾದಾಗ 48 ಗಂಟೆಯಲ್ಲಿ ಪರಿಹಾರ ನೀಡಬೇಕು. ಕಂಟ್ರೋಲ್‌ ರೂಮ್ ಸದಾ ಆ್ಯಕ್ಟೀವ್ ಆಗಿರಬೇಕು. ಕಾಳಜಿ ಕೇಂದ್ರದಲ್ಲಿ ಇಲಾಖೆ ಸೂಚಿಸಿದ ಪ್ರಕಾರವೇ ಊಟೋಪಚಾರ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಪರಿಶೀಲನಾ ಸಭೆ ನಡೆಸುವಂತೆ ವಿನಂತಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರೆಡ್ ಅಲರ್ಟ್ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸರ್ಕಾರದ ಸಿದ್ಧತೆ ಕುರಿತು ಮಾತನಾಡಿದ ಅವರು, ಎಲ್ಲೆಲ್ಲಿ ಭೂಕುಸಿತ ಆಗುವ ಸಾಧ್ಯತೆ ಇದೆಯೋ ಅಲ್ಲಿನ ಜನರ ಮನವೊಲಿಸಿ ಖುದ್ದು ಡಿಸಿಗಳೇ ಸ್ಥಳಾಂತರ ಮಾಡಿಸಬೇಕು. ಪ್ರಾಣಹಾನಿ ಆಗದಂತೆ ತಡೆಯಬೇಕು ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ಸಲಕರಣೆಗಳೊಂದಿಗೆ ಒಂದು ವಾಹನ‌ ಸದಾ ಸಿದ್ಧವಾಗಿರಬೇಕು. ಇದರಿಂದ ರಸ್ತೆಯಲ್ಲಿ ಮರ ಬಿದ್ದಾಗ ತೆರವುಗೊಳಿಸಲು, ನೆರೆ ಹಾವಳಿ ಉಂಟಾದಾಗ ಕಾರ್ಯಾಚರಣೆ ನಡೆಸಲು ಅನುಕೂಲ ಆಗುತ್ತದೆ. ಸರ್ಕಾರ ಮಳೆಗಾಲ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ ಎಂದು ಹೇಳಿದರು.

ಎನ್​ಡಿಆರ್​ಎಫ್​ 4 ತಂಡಗಳು ಇರುವ ಸ್ಥಳಗಳು

1. ದಕ್ಷಿಣ ಕನ್ನಡ- ಉಡುಪಿ, ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ ಎನ್​ಡಿಆರ್​ಎಫ್ ಪಡೆನಿಯೋಜನೆ

2. ಕೊಡಗು- ಮೈಸೂರು, ಹಾಸನ, ಚಿಕ್ಕಮಗಳೂರು ಭಾಗಕ್ಕೆ ತುರ್ತು ರಕ್ಷಣಾ ಪಡೆ ರವಾನೆ

3. ಬೆಳಗಾವಿ - ಬಾಗಲಕೋಟ, ವಿಜಯಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ ರಕ್ಷಣಾ ಪಡೆ ಠಿಕಾಣಿ

4. ರಾಯಚೂರು - ಯಾದಗಿರಿ, ಬಳ್ಳಾರಿ, ಕಲಬುರ್ಗಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ ಮತ್ತೊಂದು ಎನ್​ಡಿಆರ್​ಎಫ್​ ಪಡೆ ನಿಯೋಜಿಸಲಾಗಿದೆ.

ಇದಲ್ಲದೇ, ಬೆಂಗಳೂರಿನಲ್ಲಿ ಒಂದು ತಂಡ ಕಾರ್ಯಾಚರಣೆಗೆ ಸದಾ ಸಿದ್ಧವಾಗಿರುತ್ತದೆ. ಹೀಗೆ ಎಲ್ಲ‌ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಎಸ್​ಡಿಆರ್​ಎಫ್​ ತಂಡಗಳು ಸಹ ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಎಲ್ಲ ಜಿಲ್ಲಾಧಿಕಾರಿಗಳು ಅಗತ್ಯ ಇರುವ ಎಲ್ಲ ಸಾಮಗ್ರಿಗಳನ್ನು ತಕ್ಷಣವೇ ಖರೀದಿ ಮಾಡಬೇಕು. ಬೆಳೆಹಾನಿ ಆದಾಗ ಶೀಘ್ರವಾಗಿ ಪರಿಹಾರ ವಿತರಣೆ ಆಗಬೇಕು. ಈಗಾಗಲೇ ಕೆಲವು ಜಿಲ್ಲೆಯಲ್ಲಿ ಆದ ಬೆಳೆಹಾನಿಗೆ ತ್ವರಿತವಾಗಿ ಪರಿಹಾರ ನೀಡುವಂತೆ ಸೂಚನೆ ನೀಡಿದರು.

ಓದಿ:ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ: ಆರೋಪಿಗಳ ಮನೆ ಕೆಡವಿದ 'ಬುಲ್ಡೋಜರ್'

ABOUT THE AUTHOR

...view details