ಬೆಂಗಳೂರು: ಬೆಂಗಳೂರಿನಲ್ಲಿ ಲಾಕ್ಡೌನ್ ಮಾಡುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ. ನಿನ್ನೆ ಶಿವಾಜಿ ನಗರದಲ್ಲಿನ ಸಿವಿಲ್ ಕಾಮಗಾರಿಗಳ ವೀಕ್ಷಣೆಯ ವೇಳೆ ಕಮರ್ಷಿಯಲ್ ಸ್ಟ್ರೀಟ್‍ಗೆ ಕಂದಾಯ ಸಚಿವರು ಭೇಟಿ ನೀಡಿ ಅಲ್ಲಿನ ಕಾಮಗಾರಿಗಳ ವೀಕ್ಷಣೆ ಮಾಡಿದ ನಂತರ ಬೆಂಗಳೂರು ಲಾಕ್ಡೌನ್ ಬಗ್ಗೆ ಮಾಹಿತಿ ನೀಡಿದರು.
ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು:
ಸದ್ಯದ ಪರಿಸ್ಥಿತಿ ಕುರಿತಂತೆ ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತದೆ. ಆಗಸ್ಟ್ 15ರ(ನಾಳೆ) ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರಸ್ತುತ ಕೇರಳದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಅತಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಎರಡನೇ ಅಲೆಯಲ್ಲಾದ ತಪ್ಪುಗಳು ಮರುಕಳಿಸಿದಂತೆ ಮೂರನೇ ಅಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸದ್ಯಕ್ಕೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ:
ಪ್ರಸ್ತುತ ಸಾಲು-ಸಾಲು ಹಬ್ಬಗಳು ಬರುತ್ತಿರುವ ಕಾರಣ ಸಾರ್ವಜನಿಕರು ಗುಂಪುಗೂಡದಂತೆ ನಿರ್ಬಂಧಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೇವಲ ಲಾಕ್ಡೌನ್ ಅಥವಾ ಕರ್ಫ್ಯೂ ಒಂದೇ ಕೋವಿಡ್ ನಿಯಂತ್ರಣಕ್ಕೆ ಪರಿಹಾರವಾಗಲಾರದು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಆಯಾ ಜಿಲ್ಲೆಗಳಲ್ಲಿ ಅಗತ್ಯ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ. ಸದ್ಯಕ್ಕೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಕಳಪೆ ಕಾಮಗಾರಿ ಕುರಿತು ಆಕ್ರೋಶ:
ಕಾಮಗಾರಿ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಸಚಿವ, ಕಮರ್ಷಿಯಲ್ ಸ್ಟ್ರೀಟ್ನಲ್ಲಿನ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಗುತ್ತಿಗೆದಾರರು ಕೂಡಲೇ ಕಾಮಗಾರಿಯನ್ನು ಪುನಃ ಕೈಗೊಂಡು ಸಂಪೂರ್ಣವಾಗಿ ಮತ್ತೆ ನಿರ್ಮಿಸಬೇಕು. ಈ ರಸ್ತೆ ಕಾಮಗಾರಿಯನ್ನು ಈಗಾಗಲೇ ಉದ್ಘಾಟನೆ ಮಾಡಲಾಗಿದೆ. ಆದರೆ ಇಲ್ಲಿನ ವರ್ತಕರು ಹಾಗೂ ವೆಲ್‍ಫೇರ್ ಅಸೋಸಿಯೇಷನ್ ಅವರು ಈ ಕೆಲಸದ ಕುರಿತು ಸಾಕಷ್ಟು ದೂರುಗಳನ್ನು ಸಲ್ಲಿಸಿದ್ದರು. ಈ ಕಾರಣಕ್ಕೆ ಖುದ್ದು ನಾನೇ ಕಾಮಗಾರಿಯನ್ನು ಪರಿಶೀಲನೆ ಮಾಡಲು ಬಂದಿದ್ದೇನೆ.