ಬೆಂಗಳೂರು: ಸದನದಲ್ಲಿ ನಿಂತು ಮಾತನಾಡುವಾಗ ಪ್ರತಿಪಕ್ಷ ಅಂದರೆ ಶಾಡೋ ಅಸೆಂಬ್ಲಿ ಎನ್ನುತ್ತೀರಿ. ನಿಮಗೂ ಆ ಜವಾಬ್ದಾರಿ ಇದೆ ತಾನೇ. ನೀವು ಎಲ್ಲಿ ಹೋಗಿದ್ದೀರಿ ತಿಳಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹಕ್ಕೆ ತುತ್ತಾದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗಿಗೆ ಈಗಾಗಲೇ ಭೇಟಿ ನೀಡಿದ್ದೇನೆ. ಆ ಸಮಯದಲ್ಲಿ ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಿರಿ. ನನ್ನ ಭೇಟಿಯ ವಿಚಾರ ತಮಗೆ ಗೊತ್ತಾಗದೆ ಇರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ವ್ಯಂಗ್ಯವಾಡಿದರು.
ಪ್ರತಿಪಕ್ಷದವರಾಗಿ ನೀವು ಎಲ್ಲೆಲ್ಲಿಗೆ ಹೋಗಿದ್ದಿರಿ ತಿಳಿಸಿ ಎಂದು ಸಿದ್ದರಾಮಯ್ಯನ್ನು ಪ್ರಶ್ನಿಸಿದ ಅವರು, ಯಾದಗಿರಿ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ನಾನು ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೊಂದಾಣಿಕೆಯಿಂದ ಇದ್ದೇವೆ. ಅವರು ನನ್ನ ಸಹೋದ್ಯೋಗಿ. ನಾನು ಅವರ ಇಲಾಖೆ ಬಗ್ಗೆ, ಅವರು ನನ್ನ ಇಲಾಖೆ ಬಗ್ಗೆ ಮಾತನಾಡಬಹುದು. ಅದೇ ರೀತಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೀಗೆ ಹೊಂದಾಣಿಕೆಯಿಂದ ಮಾತನಾಡಲಿ ನೋಡೋಣ. ನಿಮ್ಮ ಸ್ನೇಹವನ್ನು ತೋರಿಸಿ ನೋಡೋಣ ಎಂದು ಸವಾಲು ಹಾಕಿದರು.
ಗಲಭೆ ಪ್ರದೇಶಕ್ಕೆ ನಾನು ಹೋದರೆ ನಿಮಗೆ ಭಯವಾಗುತ್ತದೆ ಎನ್ನುವುದಾದರೆ ಹೋಗುವುದಿಲ್ಲ ಬಿಡಿ ಸಿದ್ದರಾಮಯ್ಯನವರೇ ಎಂದು ಟಾಂಗ್ ನೀಡಿದರು. ಗೃಹಸಚಿವರು ಅತಿವೃಷ್ಟಿ ಸಮೀಕ್ಷೆಗೆ ಪ್ರವಾಸ ಮಾಡುತ್ತಿದ್ದಾರೆ. ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಕಾವಲ್ ಬೈರಸಂದ್ರ ಗಲಭೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.