ಬೆಂಗಳೂರು:ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಸೆಕ್ಷನ್ 5 ಅಡಿಯಲ್ಲಿ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿಸಿ ಆದೇಶ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪು ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗೋಹತ್ಯೆ ನಿಷೇಧ ಕಾಯ್ದೆಯ ಅನುಷ್ಠಾನ ವಿಚಾರದಲ್ಲಿ ಸರ್ಕಾರದ ಆದೇಶವನ್ನು ಉಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಇದನ್ನು ನಾವೆಲ್ಲರೂ ಗೌರವಿಸಿ, ಪಾಲಿಸಬೇಕು. ಈ ನಿಯಮ ಜಾರಿಯ ಅರ್ಜಿ ಕುರಿತಂತೆ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿರುವುದನ್ನು ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.
ಯಾವುದೇ ನಿರ್ದಿಷ್ಟ ಧರ್ಮದವರಾಗಲಿ ಗೋಮಾತೆಯನ್ನು ಸಂರಕ್ಷರಣೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎನ್ನುವುದನ್ನು ಅರಿತು ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ವಿಚಾರವನ್ನು ನ್ಯಾಯಾಲಯವು ಆಳವಾಗಿ ಅಧ್ಯಯನ ಮಾಡಿ ಸರಿಯಾದ ತೀರ್ಪು ನೀಡಿದೆ. ಎಲ್ಲರಿಗೂ ಅಮೃತ ನೀಡುತ್ತಿರುವ ಗೋವು ರಕ್ಷಣೆಯಾಗಬೇಕು. ಗೋವು ಜಾಗೃತಿಯಿಂದ ನಾಡು, ಜನತೆ ಒಂದುಗೂಡಲು ಸಾಧ್ಯವಾಗುತ್ತದೆ. ಗೋವು ಹಾಲು ಕುಡಿಯುವವರು ಗೋ ಮಾತೆ ಸೇವೆಗೆ ಕಟಿಬದ್ಧರಾಗಬೇಕು. ಎಲ್ಲರ ತಾಯಿಯಾದ ಗೋ ಮಾತೆಯ ಸೇವೆ ದೇಶ ಕಲ್ಯಾಣಕ್ಕೆ ಪೂರಕವಾಗಿದೆ ಎಂದು ಹೇಳಿದ್ದಾರೆ.