ಬೆಂಗಳೂರು :ರಾಜ್ಯದಲ್ಲಿ ಶೀಘ್ರದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇನೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ತಂದೇ ತರುತ್ತೇನೆ.. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ತಂಡ ರಚಿಸಿ, ಎಲ್ಲರ ಅಭಿಪ್ರಾಯ ಪಡೆದು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದೇ ತರುತ್ತೇನೆ ಎಂದು ಸ್ಪಷ್ಟಪಡಿಸಿದರು. ರಾಜಸ್ಥಾನ್,ಆಂಧ್ರ, ತೆಲಂಗಾಣ, ಅಸ್ಸೋಂ, ಬಿಹಾರ, ಚಂಡೀಗಢ್ ಸೇರಿ ಹಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಬದ್ಧವಾಗಿದೆ ಎಂದರು.
ಕೋವಿಡ್-19 ಸೋಂಕು ಇಳಿಮುಖವಾದ ನಂತರ ತಜ್ಞರ ತಂಡವನ್ನ ರಚನೆ ಮಾಡಿ, ಅಗತ್ಯ ಬಿದ್ದಲ್ಲಿ ಉತ್ತರಪ್ರದೇಶ ಹಾಗೂ ಗುಜರಾತ್ಗೆ ಭೇಟಿ ನೀಡಿ, ಈ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ರೀತಿಯ ಅಧ್ಯಯನ ಮಾಡುತ್ತೇವೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಬಗ್ಗೆ ಉಲ್ಲೇಖಿಸಿದ್ದೇವೆ. ನಮ್ಮ ಭೂಮಿಯಲ್ಲೂ ಗೋಹತ್ಯೆ ನಿಷೇಧ ಕಾಯ್ದೆ ಬರಬೇಕು. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ, ಶೀಘ್ರ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.
ಪ್ರೋತ್ಸಾಹ ಧನ ಬಿಡುಗಡೆಗೆ ಕ್ರಮ :ಫೆಬ್ರುವರಿವರೆಗೂ ಹಾಲು ಪೂರೈಕೆದಾರರಿಗೆ 1,249 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಮಾರ್ಚ್ನಿಂದ ಜೂನ್‌ವರೆಗೆ 535 ಕೋಟಿ ರೂ. ಪ್ರೋತ್ಸಾಹ ಧನವನ್ನ ಡಿಬಿಟಿ ಮೂಲಕ ರೈತರಿಗೆ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಪಶು ಆ್ಯಂಬುಲೆನ್ಸ್ಗೆ ಚಾಲನೆ: ಶೀಘ್ರದಲ್ಲಿ ಪಶು ಆ್ಯಂಬುಲೆನ್ಸ್ ವಾಹನವನ್ನ ಜಾರಿಗೆ ತರಲಿದ್ದೇವೆ. ಮೊದಲಿಗೆ 16 ಜಿಲ್ಲೆಗಳಲ್ಲಿ ಈ ವಿಶೇಷ ಪಶು ಆ್ಯಂಬುಲೆನ್ಸ್ನ್ನ ಜಾರಿಗೆ ತರಲಿದ್ದೇವೆ. ಪಶು ಮಾಲೀಕರು ಕರೆ ಮಾಡಿದರೆ, ಪಶು ವೈದ್ಯರು ಮನೆಗೆ ಬಂದು ಚಿಕಿತ್ಸೆ ಕೊಡಲಿದ್ದಾರೆ ಎಂದರು. ಸಕಾಲಕ್ಕೆ ವೈದ್ಯರು ಬರ್ತಾ ಇಲ್ಲ ಎಂಬ ದೂರುಗಳು ಬರುತ್ತಿತ್ತು. ಈ ಸಂಬಂಧ ವಾರ್ ರೂಂ ಮಾಡಲು ನಿರ್ಧರಿಸಲಾಗಿದೆ. ಪಶುಪಾಲಕರು ತಮ್ಮ ಎಲ್ಲಾ ಸಮಸ್ಯೆಗಳನ್ನು, ದೂರುಗಳನ್ನು ಕರೆ ಮಾಡಿ ಹೇಳಿದರೆ ತಕ್ಷಣ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.