ಬೆಂಗಳೂರು: ಹಿರಿಯರನ್ನು ಕೈ ಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡುವ ವಿಚಾರವಾಗಿ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಕೆಲವರನ್ನು ಸಚಿವ ಸ್ಥಾನದಿಂದ ತೆಗೆಯುತ್ತಾರೆ ಎಂಬುದು ಕೂಡಾ ಸುಳ್ಳು. ನಾನು ಕೊನೆಯವರೆಗೂ ಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಪುಕ್ಸಟ್ಟೆ ಪ್ರಚಾರಕ್ಕಾಗಿ ಮಾತಾಡ್ತಿದ್ದಾರೆ. ಮೇಕೆದಾಟು ಯೋಜನೆ ರೂಪಿಸಿ, ಹಣ ಬಿಡುಗಡೆ ಮಾಡಿದ್ದು ನಮ್ಮ ಸರ್ಕಾರ. ಮೇಕೆದಾಟು ಯೋಜನೆ ನಮ್ಮ ಕೂಸು, ಆದರೆ ಡಿಕೆಶಿ ಪಾದಯಾತ್ರೆ ಮೂಲಕ ಅದರ ಹೆಸರು ಪಡೆಯಲು ಹೊರಟಿದ್ದಾರೆ. ಅವರ ಪಾದಯಾತ್ರೆಯಿಂದ ನಮಗೇನೂ ಭಯ ಇಲ್ಲ. ಹಳೆ ಮೈಸೂರು ಭಾಗದಲ್ಲಿ ಇಬ್ಬರೂ ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಪಕ್ಷ ಸಂಘಟಿಸಿ, ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ ಎಂದರು.
ಚುನಾವಣೆಗಳಲ್ಲಿ ಜೆಡಿಎಸ್ಗೆ ಹಿನ್ನಡೆ ವಿಚಾರದ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರಿಗೆ ಪಕ್ಷದ ಮೇಲೆ ಹಿಡಿತ ತಪ್ಪಿದೆ. ಅದಕ್ಕಾಗಿ ಚುನಾವಣೆಗಳಲ್ಲಿ ಸೋಲಾಗ್ತಿದೆ. ಅವರು ದೊಡ್ಡವರು, ನಾನು ಅವರಿಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಆದರೆ ಬರುವ ಚುನಾವಣೆಯಲ್ಲಿ ಅವರ ಪಕ್ಷದಿಂದ ಬಿಜೆಪಿಗೆ ಬರ್ತಾರೆ. ತುಂಬಾ ಜನ ಬಿಜೆಪಿಗೆ ಬರ್ತಾರೆ. ಬರುವವರ ಪಟ್ಟಿ ದೊಡ್ಡದಿದೆ. ಅದನ್ನು ಮುಂದೆ ಬಹಿರಂಗಪಡಿಸ್ತೇನೆ ಎಂದರು.
ಕಾಶಿನಾಥ ನಾಯ್ಕರಿಗೆ ನಗದು ಪುರಸ್ಕಾರ: ಇದೇ ವೇಳೆ ಸಚಿವ ನಾರಾಯಣಗೌಡ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಗುರುವಾದ ಕಾಶಿನಾಥ ನಾಯ್ಕರಿಗೆ 5 ಲಕ್ಷ ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.