ಕರ್ನಾಟಕ

karnataka

By

Published : Mar 16, 2021, 7:01 PM IST

ETV Bharat / city

ನಿವೇಶನ ಲಭ್ಯತೆ ಆಧಾರದ ಮೇಲೆ ಕ್ರೀಡಾಂಗಣ ನಿರ್ಮಾಣ: ಸಚಿವ ನಾರಾಯಣಗೌಡ

ಕೇಂದ್ರದ ಅನುದಾನ ಬಳಸಿ ಕ್ರೀಡಾಂಗಣ ನಿರ್ಮಿಸುವಂತೆ ಸಚಿವರು ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರದ ಪಾತ್ರ ಏನು, ರಾಜ್ಯ ಸರ್ಕಾರ ಇರುವುದಾದರೂ ಏಕೆ, ಗಡಿ ಭಾಗದ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಬೇಡ. ಎಸ್ಟಿಮೇಟ್ ಮಾಡಿಸಿ ಕ್ರೀಡಾಂಗಣ ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

minister-narayana-gowda-talk
ಸಚಿವ ನಾರಾಯಣಗೌಡ

ಬೆಂಗಳೂರು: ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಕ್ರೀಡಾಂಗಣವನ್ನು ನಿವೇಶನ ಲಭ್ಯತೆ ಆಧಾರದ ಮೇಲೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ಸಚಿವ ನಾರಾಯಣಗೌಡ

ಓದಿ: ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ಆರೋಪ ಪ್ರಕರಣ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಬಿಜೆಪಿಯ ಅಭಯ್ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಕ್ರೀಡಾ ಇಲಾಖೆಯ ವತಿಯಿಂದ 29 ಜಿಲ್ಲಾ ಕೇಂದ್ರಗಳಲ್ಲಿ 121 ತಾಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಉಳಿದ ಕಡೆಯೂ ನಿವೇಶನ ಲಭ್ಯತೆ ಆಧರಿಸಿ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಹೇಳಿದರು.

ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಯಳ್ಳೂರು ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಿಸುವ ಉದ್ದೇಶ ಇದೆ. ಭಾರತ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ 50 ಕೋಟಿ ರೂ. ಅನುದಾನ ಕೋರಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಯಳ್ಳೂರು ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಿಸಲು ಸೂಕ್ತವಾದ 54 ಎಕರೆ ಸರ್ಕಾರಿ ನಿವೇಶನ ಲಭ್ಯವಿರುತ್ತದೆ. ಈ ನಿವೇಶನವು ಬೆಳಗಾವಿ ನಗರದ ಎಲ್ಲ ಭಾಗಗಳಿಗೆ ಉತ್ತಮ ಸಂಪರ್ಕ ಕಲ್ಪಿಸುವ ಬೆಳಗಾವಿ ರಿಂಗ್ ರಸ್ತೆ ಸಮೀಪದಲ್ಲಿದೆ. ವಿಧಾನಸಭೆಯ ಅಂದಾಜು ಸಮಿತಿಗಳ ಅಧ್ಯಕ್ಷರ ಉಪಸ್ಥಿತಿಯಲ್ಲಿ ಭೂ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಅಂತಾರಾಷ್ಟ್ರೀಯ ಕ್ರೀಡಾ ಸೌಲಭ್ಯಗಳನ್ನು ಹೊಂದಿದ ಕ್ರೀಡಾ ಕೇಂದ್ರವಾಗಿ ರೂಪಿಸಲು ಸೂಕ್ತವಾಗಿರುವುದು ತಿಳಿದು ಬಂದಿರುತ್ತದೆ ಎಂದರು.

ಈ ನಿವೇಶನವನ್ನು ಕಂದಾಯ ಇಲಾಖೆಯಿಂದ ಕ್ರೀಡಾ ಇಲಾಖೆಗೆ ಮಂಜೂರು ಮಾಡಿ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿವೇಶನದಲ್ಲಿ ಪೆವಿಲಿಯನ್ ಕಟ್ಟಡ, ಗ್ಯಾಲರಿ, ಸಿಂಥೆಟಿಕ್ ಅಂಥ್ಲೆಟಿಕ್ ಟ್ರ್ಯಾಕ್, ಸಿಂಥೆಟಿಕ್ ಹಾಕಿ ಟಾಫ್, ಸಿಂಥೆಟಿಕ್ ಫುಟ್ಬಾಲ್ ಟರ್ಫ್, ಈಜುಕೊಳ ಮತ್ತು ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ಒಳಗೊಂಡಂತೆ ಕ್ರೀಡಾ ಮೂಲಸೌರ್ಯಗಳನ್ನು 50 ಕೋಟಿ ರೂ. ವೆಚ್ಚದಲ್ಲಿ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ 2021, ಫೆ. 17ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 25 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 25 ಕೋಟಿ ರೂ. ಭರಿಸಬೇಕಾಗುತ್ತದೆ ಎಂದು ಸಚಿವರು ಹೇಳಿದರು.

ಇದಕ್ಕೂ ಮೊದಲು ಪ್ರಶ್ನೆ ಕೇಳಿದ್ದ ಅಭಯ್ ಪಾಟೀಲ್ ಅವರು ಸರ್ಕಾರ ಯಳ್ಳೂರಿನಲ್ಲಿ ಕ್ರೀಡಾಂಗಣ ನಿರ್ಮಿಸಲು 50 ಕೋಟಿ ರೂ. ಕೇಂದ್ರದಿಂದ ಪಡೆಯುವುದಾಗಿ ಹೇಳಿದೆ. 50 ಕೋಟಿ ರೂ.ನಲ್ಲಿ ಇವರು ಹೇಳಿದಂತೆ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಿಲ್ಲ. ಕಾಂಪೌಂಡ್ ಕಟ್ಟಲಿಕ್ಕೆ 20 ಕೋಟಿ ರೂ. ಬೇಕು. ಸರಿಯಾಗಿ ಎಸ್ಟಿಮೇಟ್ ಮಾಡಿಸಿ ಉತ್ತರ ನೀಡಬೇಕು. ಈ ಕ್ರೀಡಾಂಗಣ ನಿರ್ಮಾಣಕ್ಕೆ 500 ಕೋಟಿ ವೆಚ್ಚವಾಗುತ್ತದೋ, 200 ಕೋಟಿ ವೆಚ್ಚವಾಗುತ್ತದೋ ಗೊತ್ತಿಲ್ಲ ಎಂದರು.

ಕೇಂದ್ರದ ಅನುದಾನ ಬಳಸಿ ಕ್ರೀಡಾಂಗಣ ನಿರ್ಮಿಸುವಂತೆ ಸಚಿವರು ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರದ ಪಾತ್ರ ಏನು, ರಾಜ್ಯ ಸರ್ಕಾರ ಇರುವುದಾದರೂ ಏಕೆ, ಗಡಿ ಭಾಗದ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಬೇಡ. ಎಸ್ಟಿಮೇಟ್ ಮಾಡಿಸಿ ಕ್ರೀಡಾಂಗಣ ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ABOUT THE AUTHOR

...view details